ಹೊಸದಿಗಂತ ವರದಿ, ವಿಜಯಪುರ:
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ವಿಜಯಪುರದ ಆರೋಪಿಗಳು ಹೊರ ಬಂದಿದ್ದು, ಹಿಂದೂ ಸಂಘಟನೆಗಳ ಮುಖಂಡರು ಸ್ವಾಗತಿಸಿದರು.
ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆ, ಸಿಂದಗಿ ಪಟ್ಟಣದ ಬಸವನಗರ ನಿವಾಸಿ ಪರಶುರಾಮ ವಾಘ್ಮೋರೆ ಬಿಡುಗಡೆಯಾಗಿದ್ದಾರೆ.
ನಿನ್ನೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಈ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಆರೋಪಿಗಳು ಬಿಡುಗಡೆಯಾಗಿದ್ದಾರೆ. ಗೌರಿ ಲಂಕೇಶ್ ಹತ್ಯೆ ಬಳಿಕ ಸುಮಾರು ಆರುವರೆ ವರ್ಷಗಳ ಬಳಿಕ 25 ಜನ ಆರೋಪಿತರಲ್ಲಿ 18 ಜನರಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ನೀಡಿದ್ದು, ಇನ್ನೂ 7 ಜನ ಆರೋಪಿತರಿಗೂ ಜಾಮೀನು ಸಿಗಲಿದೆ ಎನ್ನಲಾಗಿದೆ.
ಗೌರಿ ಹತ್ಯೆ ಪ್ರಕರಣದ ಇಬ್ಬರು ಆರೋಪಿತರನ್ನು ಜಿಲ್ಲೆಯ ಹಿಂದೂ ಪರ ಸಂಘಟನೆಗಳ ಹಾಗೂ ಶ್ರೀರಾಮ ಸೇನೆಯ ಮುಖಂಡರು ಪದಾಧಿಕಾರಿಗಳು ಸ್ವಾಗತ ಮಾಡಿದ್ದಾರೆ. ನಗರದ ಕಾಳಿಕಾ ಮಂದಿರದಲ್ಲಿ ಇಬ್ಬರೂ ಆರೋಪಿತರು ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಆರೋಪಿಗಳಾದ ಪರಶುರಾಮ ವಾಘ್ಮೋರೆ ಹಾಗೂ ಮನೋಹರ ಯಡವೆಗೆ ಸನ್ಮಾನಿಸಲಾಯಿತು. ಅನಂತರ ಆರೋಪಿಗಳು ಶಿವಾಜಿ ವೃತ್ತಕ್ಕೆ ತೆರಳಿ ಶಿವಾಜಿ ಮೂರ್ತಿಗೆ ಹಾರ ಹಾಕಿದರು.