ಹೊಸದಿಗಂತ ವರದಿ ಅಂಕೋಲಾ:
ಇತ್ತೀಚೆಗೆ ನ್ಯೂಯಾರ್ಕ್ ನ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಬೇಸಿಗೆ ಚರ್ಚಾ ಶಿಬಿರದಲ್ಲಿ ಭಾಗವಹಿಸಿದ್ದ ಅಂಕೋಲಾ ಮೂಲದ ಗೌರಿ ಎಸ್. ನಾಯಕ ಅಗ್ರ ಸ್ಥಾನ ಪಡೆದಿದ್ದಾರೆ.
ಸದ್ಯ ಉಡುಪಿ ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ನ 10ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಗೌರಿ, ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 14 ದೇಶಗಳ 126 ಚರ್ಚಾ ಸ್ಪರ್ಧಿಗಳ ನಡುವೆ ಅತ್ಯುತ್ತಮ ಇಬ್ಬರು ಚರ್ಚಾ ಸ್ಪರ್ಧಿಗಳಲ್ಲಿ ಒಬ್ಬರೆಂದು ಆಯ್ಕೆಯಾಗಿದ್ದಾರೆ.
ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದ ನಾಲ್ಕು ವಿದ್ಯಾರ್ಥಿಗಳಲ್ಲಿ ಗೌರಿ ಎಸ್. ನಾಯಕ ಒಬ್ಬರಾಗಿದ್ದಾರೆ. ಮೈಸೂರಿನ ವಿವೇಕಾನಂದ ಭಾರತೀಯ ಅಧ್ಯಯನ ಸಂಸ್ಥೆಯು ಕಾರ್ನೆಲ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಐದು ದಿನಗಳ ಚರ್ಚಾ ಕಾರ್ಯಾಗಾರದ ನಂತರ ಗೌರಿ ಅವರನ್ನು ಅಂತಾರಾಷ್ಟ್ರೀಯ ಬೇಸಿಗೆ ಚರ್ಚಾ ಶಿಬಿರಕ್ಕೆ ಆಯ್ಕೆ ಮಾಡಲಾಗಿತ್ತು.
ಗೌರಿ ಎಸ್. ನಾಯಕ ಅವರ ಸಾಧನೆಯಿಂದ ಉತ್ತರ ಕನ್ನಡ ಜಿಲ್ಲೆ ಹೆಮ್ಮೆ ಪಡುವಂತಾಗಿದೆ. ಗೌರಿ ಅವರು ಶ್ರೀಧರ್ ಜಿ. ನಾಯಕ ಮತ್ತು ರಂಜನಾ ಎಸ್. ನಾಯಕ ದಂಪತಿ ಪುತ್ರಿಯಾಗಿದ್ದು, ಅಂಕೋಲಾ ತಾಲೂಕಿನ ಬೇಲೇಕೇರಿಯ ನಾಗಮಣಿ ನಾಯಕ ಹಾಗೂಅಂಕೋಲೆಯ ಶ್ಯಾಮಲಾ ಮತ್ತು ವೆಂಕಣ್ಣ ನಾಯಕ ಶಿಕ್ಷಕ ದಂಪತಿಯ ಮೊಮ್ಮಗಳಾಗಿದ್ದಾಳೆ.