ಕಾಸರಗೋಡಿನ ಕ್ರೀಡಾಂಗಣ ರಸ್ತೆಗೆ ಗಾವಸ್ಕರ್ ಹೆಸರು: ಜನತೆಯ ಪ್ರೀತಿಗೆ ಕ್ರಿಕೆಟರ್ ಫಿದಾ!

 ಹೊಸದಿಗಂತ ಕಾಸರಗೋಡು:

ಪ್ರಖ್ಯಾತ ಕ್ರಿಕೆಟ್ ಆಟಗಾರರಾಗಿದ್ದ ಸುನೀಲ್ ಗಾವಸ್ಕರ್ ಅವರು ಶುಕ್ರವಾರ ಸಂಜೆ ಕಾಸರಗೋಡು ನಗರಕ್ಕೆ ಭೇಟಿ ನೀಡಿದರು. ನಂತರ ಅವರ ಸಮ್ಮುಖದಲ್ಲಿ ಕಾಸರಗೋಡು ನಗರಸಭೆಯ ಅಧೀನದಲ್ಲಿರುವ ವಿದ್ಯಾನಗರ ನಗರಸಭಾ ಕ್ರೀಡಾಂಗಣಕ್ಕಿರುವ ರಸ್ತೆಗೆ ಸುನೀಲ್ ಗಾವಸ್ಕರ್ ಮುನ್ಸಿಪಲ್ ಸ್ಟೇಡಿಯಂ ರಸ್ತೆ ಎಂದು ನಾಮಕರಣ ಮಾಡಲಾಯಿತು.

ನಾಮಕರಣ ಕಾರ್ಯಕ್ರಮದ ಬಳಿಕ ಸುನೀಲ್ ಗಾವಸ್ಕರ್ ಅವರನ್ನು ಆಸಂಖ್ಯಾತ ವಾಹನಗಳ ಬೆಂಗಾವಲಿನೊಂದಿಗೆ ತೆರೆದ ವಾಹನದಲ್ಲಿ ಚೆಟ್ಟುಂಗುಳಿಯಲ್ಲಿರುವ ರೋಯಲ್ ಕನ್ ವೆನ್ಶನ್ ಸೆಂಟರ್ ಗೆ ಕರೆ ತರಲಾಯಿತು.

ನಂತರ ಜರಗಿದ ಸಮಾರಂಭದಲ್ಲಿ ಕಾಸರಗೊಂಡು ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸುನೀಲ್ ಗಾವಸ್ಕರ್ ಅವರನ್ನು ವಿವಿಧ ಸಂಘಟನೆಗಳ ಪರವಾಗಿ ಅದ್ದೂರಿಯಾಗಿ
ಕಾಸರಗೋಡಿನ ಸನ್ಮಾನಿಸಲಾಯಿತು.

ಕಾಸರಗೋಡಿನ ಜನರು ಹಾಗೂ ಕ್ರೀಡಾಪ್ರೇಮಿಗಳು ತನಗೆ ನೀಡಿದ ಸನ್ಮಾನಕ್ಕೆ ಹಾಗೂ ಆತ್ಮೀಯ ಸ್ನೇಹಕ್ಕೆ ಯಾವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಬೇಕು ಎಂದು ತಿಳಿಯುತ್ತಿಲ್ಲವೆಂದು ಅವರು ಇದೇ ಸಂದರ್ಭ ಭಾವುಕರಾಗಿ ನುಡಿದರು.

ರಣಜಿ ಟ್ರೋಫಿ ಪಂದ್ಯಾಟದಲ್ಲಿ ಕೇರಳ ತಂಡವು ಈಗಾಗಲೇ ಸೆಮಿ ಫೈನಲ್‌ ತಲುಪಿದ್ದು ಆದ್ದರಿಂದ ಕೇರಳ ತಂಡವು ರಣಜಿ ಟ್ರೋಫಿ ಪಡೆಯುವುದರಲ್ಲಿ ಯಾವುದೇ ಸಂಶಯ ಬೇಡ. ಕ್ರೀಡಾ ಕ್ಷೇತ್ರಕ್ಕೆ ಕೇರಳದ ಪಿ.ಟಿ.ಉಷಾ ಸಹಿತ ಅಪಾರ ಮಂದಿ ಭಾರೀ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಕ್ರಿಕೆಟ್ ಕ್ಷೇತ್ರಕ್ಕೂ ಕೇರಳದ ಕೊಡುಗೆ ಮಹತ್ವ ಪಡೆಯಲಿದೆ. ಕೇರಳದ ಹಲವಾರು ಮಂದಿ ಕ್ರೀಡಾಪಟುಗಳು ಇನ್ನಷ್ಟು ಉನ್ನಕ ಶಿಖರಕ್ಕೇರಲಿದ್ದಾರೆ. ಕಾಸರಗೋಡಿನ ರಸ್ತೆಯೊಂದಕ್ಕೆ ತನ್ನ ಹೆಸರನ್ನು ನಾಮಕರಣ ಮಾಡಿರುವ ನಿಟ್ಟಿನಲ್ಲಿ ತನಗೆ ಹೇಳಲು ಸಾಧ್ಯವಾಗದಂತಹ ಸಂತೋಷವಿದೆ. ಇಲ್ಲಿನ ಜನರು ನನಗೆ ನೀಡಿದ ಗೌರವವನ್ನು ಎಂದಿಗೂ ಮರೆಯಲಾರೆ ಎಂದು ಸುನೀಲ್ ಗಾವಸ್ಕರ್ ನುಡಿದರು.

ಕಾರ್ಯಕ್ರಮದ ಅಂಗವಾಗಿ ಮಾದಕ ದ್ರವ್ಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕಾಸರಗೋಡು ಪೊಲೀಸರು ಹೊರತಂದ ಸೇವ್ ಕಾಸರಗೋಡು ಎಂಬ ಲಾಂಭನವನ್ನು ಕ್ರಿಕೆಟ್ ತಾರೆ ಸುನೀಲ್ ಗಾವಸ್ಕರ್ ಇದೇ ವೇಳೆ ಬಿಡುಗಡೆಗೊಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಾಲಕೃಷ್ಣನ್ ನಾಯರ್, ಖಾದರ್ ತೆರುವತ್, ಮಧೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಕಾಸರಗೋಡು ನಗರಸಭಾ ಕೌನ್ಸಿಲರ್ ಗಳಾದ ಸವಿತಾ ಟೀಚರ್, ರಜನಿ ಮುಂತಾದವರು ಶುಭಹಾರೈಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಸ್ವಾಗತಿಸಿ, ಟಿ.ಎ.ಶಾಫಿ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!