ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿದ್ದ ಗಾಜಾ ಕದನ ವಿರಾಮ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ, ಇಸ್ರೇಲ್ ಗಾಜಾದ ಮೇಲೆ ಭೀಕರ ದಾಳಿ ಆರಂಭಿಸಿದೆ. ಶನಿವಾರದಂದು ನಡೆದ ಈ ದಾಳಿಯಲ್ಲಿ ಕನಿಷ್ಠ 110 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ವೈದ್ಯಕೀಯ ಮೂಲಗಳು ತಿಳಿಸಿವೆ.
ಅಲ್ಲಿನ ಪ್ರತ್ಯಕ್ಷದರ್ಶಿಗಳ ಪ್ರಕಾರ, ದಕ್ಷಿಣ ಗಾಜಾದ ರಫಾ ನಗರದಲ್ಲಿ ಇಸ್ರೇಲಿ ಸೇನೆ ಯಾವುದೇ ಎಚ್ಚರಿಕೆ ನೀಡದೇ ನೇರವಾಗಿ ಗುಂಡು ಹಾರಿಸಿದ್ದು, ಈ ದಾಳಿಯಲ್ಲಿ 34 ಜನರು ಜೀವಹಾನಿಗೆ ಒಳಗಾಗಿದ್ದಾರೆ. ಅವರು ಗಾಜಾ ಹ್ಯುಮನಿಟೇರಿಯನ್ ಫೌಂಡೇಷನ್ (GHF) ಕಚೇರಿ ಮುಂದೆ ಆಹಾರ ಸಹಾಯಕ್ಕಾಗಿ ಕಾಯುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಅಮೆರಿಕ, ಈಜಿಪ್ಟ್ ಮತ್ತು ಕತಾರ್ ನಡುವೆ ನಡೆದ ಮಧ್ಯಸ್ಥಿಕೆಯ ಮಾತುಕತೆಗಳು ನಿರಫಲವಾದ ಬೆನ್ನಲ್ಲೇ ಇಸ್ರೇಲ್ ತನ್ನ ದಾಳಿ ತೀವ್ರಗೊಳಿಸಿದೆ. ಈ ಸಂದರ್ಭದಲ್ಲಿ ಇಸ್ರೇಲ್ ಸೇನೆ ತನ್ನ ನಿಖರ ದಾಳಿ ಮುಂದುವರೆಸಿದ್ದು, ಪ್ಯಾಲೆಸ್ತೀನಿಯ ಪ್ರದೇಶಗಳಲ್ಲಿರುವ ನಾಗರಿಕ ಪ್ರದೇಶಗಳನ್ನೂ ಗುರಿಯಾಗಿಸುತ್ತಿರುವ ಆರೋಪ ಕೇಳಿಬಂದಿದೆ.
ಈ ಹೋರಾಟ ಎಲ್ಲಿ ಅಂತ್ಯ ಕಾಣುತ್ತದೆ ಎಂಬುದು ಬಹುತೇಕ ಅನಿಶ್ಚಿತವಾಗಿದ್ದು, ರಾಜತಾಂತ್ರಿಕ ದಾರಿಯ ತೀವ್ರ ಅಗತ್ಯವಿದೆ ಎಂಬ ಮಾತುಗಳು ಮತ್ತೆ ಕೇಳಿಬರುತ್ತಿವೆ. ಇನ್ನು ಮುಂದಿನ ದಿನಗಳಲ್ಲಿ ಈ ಕದನದ ಗತಿಯೇನು ಎಂಬುದು ಜಾಗತಿಕ ಗಮನ ಸೆಳೆಯುತ್ತಿದೆ.