ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾದಲ್ಲಿ ಹಲವು ತಿಂಗಳುಗಳಿಂದ ನಡೆದ ಯುದ್ಧ ಕೊನೆಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಶಾಂತಿಯ ಮೊದಲ ಹಂತವಾಗಿ ಹಮಾಸ್ ಇಸ್ರೇಲ್‌ನ ಏಳು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.
ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಬಿಡುಗಡೆಗೊಂಡ ಒತ್ತೆಯಾಳುಗಳನ್ನು ರೆಡ್‌ಕ್ರಾಸ್ ವಶಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಆದರೆ ಅವರ ಆರೋಗ್ಯ ಸ್ಥಿತಿ ಹಾಗೂ ಸುರಕ್ಷತೆ ಕುರಿತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಹಮಾಸ್ ಮೂಲಗಳ ಪ್ರಕಾರ, ಇಸ್ರೇಲ್ ವಶದಲ್ಲಿರುವ ಸುಮಾರು 1,900 ಪ್ಯಾಲೆಸ್ತೀನ್ ಕೈದಿಗಳ ಬದಲಿಗೆ ಒಟ್ಟು 20 ಒತ್ತೆಯಾಳುಗಳನ್ನು ವಿನಿಮಯ ಮಾಡಲು ಒಪ್ಪಂದವಾಗಿದೆ. ಅದರ ಮೊದಲ ಹಂತವಾಗಿ ಏಳು ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಒತ್ತೆಯಾಳುಗಳ ಕುಟುಂಬಗಳು ಸಂತೋಷ ವ್ಯಕ್ತಪಡಿಸಿದ್ದು, ಮಧ್ಯಪ್ರಾಚ್ಯದಲ್ಲಿ ಶಾಂತಿಯ ಹೊಸ ಹಾದಿ ಕಾಣಿಸಿಕೊಳ್ಳಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.

