ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಕಹಿ ನೆನಪುಗಳನ್ನು ಇತಿಹಾಸದ ಪುಟಗಳಿಗೆ ಸೇರಿಸಿ, ಜಗತ್ತು ಈಗ 2026ರ ಹೊಸ ಭರವಸೆಯ ಮುಂಜಾವಿಗೆ ಸಾಕ್ಷಿಯಾಗಿದೆ. ಎಲ್ಲೆಡೆ ಹೊಸ ವರ್ಷದ ಸಡಗರ ಮನೆ ಮಾಡಿದ್ದರೆ, ಅತ್ತ ಸರ್ಚ್ ಇಂಜಿನ್ ದೈತ್ಯ ‘ಗೂಗಲ್’ ಕೂಡ ತನ್ನದೇ ಶೈಲಿಯಲ್ಲಿ ವಿಭಿನ್ನವಾಗಿ ಹೊಸ ವರ್ಷವನ್ನು ಸ್ವಾಗತಿಸಿದೆ.

ಪ್ರತಿ ಬಾರಿಯಂತೆ ಗೂಗಲ್ ಈ ಬಾರಿಯೂ ಒಂದು ರೋಮಾಂಚಕ ಮತ್ತು ಅರ್ಥಪೂರ್ಣ ‘ಅನಿಮೇಟೆಡ್ ಡೂಡಲ್’ ಅನ್ನು ಹಂಚಿಕೊಂಡಿದೆ. ಇಂದಿನ ಡೂಡಲ್‌ನಲ್ಲಿ ಗೂಗಲ್‌ನ ಅಕ್ಷರಗಳ ನಡುವೆ ‘2026’ ರಾರಾಜಿಸುತ್ತಿದೆ. ಆದರೆ, ಈ ಬಾರಿ ಕೇವಲ ಆಚರಣೆಯಷ್ಟೇ ಅಲ್ಲದೆ, ವೈಯಕ್ತಿಕ ಬೆಳವಣಿಗೆಯ ಸಂದೇಶವೂ ಅದರಲ್ಲಿದೆ.

ಡೂಡಲ್‌ನಲ್ಲಿ 2026ರ ಸಂಖ್ಯೆಯ ಪಕ್ಕದಲ್ಲೇ ಒಂದು ಡೈರಿ ಮತ್ತು ಪೆನ್ನು ಇರುವುದು ವಿಶೇಷ. ಇದು ಹೊಸ ವರ್ಷದ ‘ರೆಸಲ್ಯೂಶನ್’ ಅಥವಾ ಹೊಸ ಗುರಿಗಳನ್ನು ಬರೆದಿಟ್ಟುಕೊಳ್ಳುವ ಸಂಕೇತವಾಗಿದೆ.

ಡೈರಿಯ ಪಕ್ಕದಲ್ಲೇ ಒಂದು ಕಪ್ ಕಾಫಿಯ ಚಿತ್ರವಿದೆ. ಇದು ಹೊಸ ದಿನದ ಉಲ್ಲಾಸದ ಆರಂಭವನ್ನು ಸೂಚಿಸುತ್ತದೆ.

ಬದುಕಿನ ಹೊಸ ವರ್ಷವೆಂಬುದು ಒಂದು ಖಾಲಿ ಡೈರಿಯಂತೆ. ಅಲ್ಲಿ ನೀವು ಏನೇನು ಸಾಧಿಸಬೇಕು ಎಂದು ಬಯಸುತ್ತೀರೋ, ಅದನ್ನು ಇಂದೇ ಬರೆದಿಟ್ಟು ಆರಂಭಿಸಿ ಎಂಬ ಪ್ರೇರಣಾತ್ಮಕ ಸಂದೇಶವನ್ನು ಈ ಡೂಡಲ್ ನೀಡುತ್ತಿದೆ. ಹಳೆಯ ನೋವುಗಳನ್ನು ಮರೆತು, ಕಾಫಿಯ ಚೈತನ್ಯದೊಂದಿಗೆ ಹೊಸ ಸಂಕಲ್ಪದತ್ತ ಹೆಜ್ಜೆ ಇಡಿ ಎಂದು ಗೂಗಲ್ ಬಳಕೆದಾರರಿಗೆ ಶುಭ ಕೋರಿದೆ.

