ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಸಣಗುಡಿ-ಊಟಿ ಅಂತರರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗೆ ಬೃಹತ್ ಗಾತ್ರದ ಹೆಬ್ಬುಲಿಯೊಂದು ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಲ್ಲಿ ಏಕಕಾಲಕ್ಕೆ ಆಶ್ಚರ್ಯ ಹಾಗೂ ಆತಂಕವನ್ನು ಮೂಡಿಸಿದೆ.
ದಟ್ಟ ಅರಣ್ಯದ ನಡುವೆ ಸಾಗುವ ಈ ಮಾರ್ಗದಲ್ಲಿ ದಷ್ಟಪುಷ್ಟವಾದ, ಆಕರ್ಷಕ ವ್ಯಾಘ್ರನೊ೦ದು ನಡೆದುಕೊಂಡು ಹೋಗುತ್ತಿದ್ದ ದೃಶ್ಯವು ಅನೇಕ ಪ್ರಯಾಣಿಕರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಹುಲಿಯ ರಾಜಗಾಂಭೀರ್ಯವನ್ನು ಕಣ್ತುಂಬಿಕೊಂಡ ಸವಾರರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಹೆಬ್ಬುಲಿಯ ಬೃಹದಾಕಾರದ ಗಾತ್ರ ಮತ್ತು ಅದರ ಲೀಲಾಜಾಲ ಸಂಚಾರವನ್ನು ನೋಡಿ ಕೆಲವರು ಆತಂಕಕ್ಕೂ ಒಳಗಾಗಿದ್ದಾರೆ. ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಹುಲಿಗಳ ಸಂಚಾರ ಹಾಗೂ ಸಂತತಿ ಹೆಚ್ಚುತ್ತಿರುವುದಕ್ಕೆ ಈ ಘಟನೆ ಮತ್ತೊಂದು ಪ್ರಮುಖ ಸಾಕ್ಷಿಯಾಗಿದೆ ಎಂದು ಅರಣ್ಯ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ.

