ಗಿಲ್, ರೋಹಿತ್ ಶತಕ: ಬೃಹತ್ ಮುನ್ನಡೆ ಪಡೆದ ಟೀಂ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಬಾರಿಸಿದ ಆಕರ್ಷಕ ಶತಕ ಹಾಗೂ ಸರ್ಫರಾಜ್ ಖಾನ್ ಮತ್ತು ದೇವದತ್ ಪಡಿಕ್ಕಲ್ ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 473 ರನ್‌ ಬಾರಿಸಿದೆ. ಈ ಮೂಲಕ ಟೀಂ ಇಂಡಿಯಾ 255 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ.

ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 135 ರನ್ ಬಾರಿಸಿದ್ದ ಟೀಂ ಇಂಡಿಯಾ, ಎರಡನೇ ದಿನವೂ ಭರ್ಜರಿ ಆರಂಭವನ್ನೇ ಪಡೆಯಿತು.

ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಆಕರ್ಷಕ ಶತಕ ಸಿಡಿಸಿದರು. ಎರಡನೇ ವಿಕೆಟ್‌ಗೆ ಗಿಲ್ ಹಾಗೂ ರೋಹಿತ್ ಜೋಡಿ 244 ಎಸೆತಗಳನ್ನು ಎದುರಿಸಿ 171 ರನ್‌ಗಳ ಜತೆಯಾಟವಾಡಿತು. ನಾಯಕ ರೋಹಿತ್ ಶರ್ಮಾ 154 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 162 ಎಸೆತಗಳನ್ನು ಎದುರಿಸಿ 103 ರನ್ ಗಳಿಸಿ ಬೆನ್ ಸ್ಟೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ಶುಭ್‌ಮನ್ ಗಿಲ್ 150 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 110 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡದ ಕನ್ನಡಿಗ ದೇವದತ್ ಪಡಿಕ್ಕಲ್ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಿಟ್ಟ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ 103 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 65 ರನ್ ಬಾರಿಸಿ ಶೋಯೆಬ್ ಬಷೀರ್‌ಗೆ ವಿಕೆಟ್ ಒಪ್ಪಿಸಿದರು.

ಇನ್ನು ಮುಂಬೈ ಮೂಲದ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತೊಂದು ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಸರ್ಫರಾಜ್ ಹಾಗೂ ಪಡಿಕ್ಕಲ್ ಜೋಡಿ 4ನೇ ವಿಕೆಟ್‌ಗೆ 97 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸರ್ಫರಾಜ್ ಖಾನ್ 60 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 56 ರನ್ ಬಾರಿಸಿ ಬಷೀರ್‌ಗೆ ಮೂರನೇ ಬಲಿಯಾದರು.

ಇನ್ನು ಇದಾದ ಬಳಿಕ ಧೃವ್ ಜುರೆಲ್ ಹಾಗೂ ರವೀಂದ್ರ ಜಡೇಜಾ ತಲಾ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರವಿಚಂದ್ರನ್ ಅಶ್ವಿನ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು. ಇದಾದ ಬಳಿಕ 9ನೇ ವಿಕೆಟ್‌ಗೆ ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಮುರಿಯದ 45 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ಆಸರೆಯಾದರು. ಕುಲ್ದೀಪ್ ಯಾದವ್ 27 ಹಾಗೂ ಜಸ್ಪ್ರೀತ್ ಬುಮ್ರಾ 19 ರನ್ ಗಳಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!