ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ಟೀಂ ಇಂಡಿಯಾ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶಕ್ತಿಶಾಲಿ ಪುನಾರಾಗಮನ ಮಾಡಿಕೊಂಡಿದೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಅತ್ಯುತ್ತಮ ಆರಂಭ ಪಡೆದಿದ್ದು ಟಾಪ್ ಆರ್ಡರ್, ನಾಯಕ ಶುಭ್‌ಮನ್ ಗಿಲ್ ಅವರ ಸ್ಫೋಟಕ ಆಟದ ನೆರವಿನಿಂದ 550 ರನ್ ಸಿಡಿಸಿ ಮುನ್ನುಗ್ಗುತ್ತಿದೆ. ಗಿಲ್ 260 ರನ್ ದಾಖಲಿಸಿ ಮಿಂಚಿದ್ದು, ಇಂಗ್ಲೆಂಡ್ ನೆಲದಲ್ಲಿ ಭಾರತೀಯರ ಸಾಧನೆಗಳಲ್ಲಿ ಹೊಸ ಅಧ್ಯಾಯ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
1979ರಲ್ಲಿ ಓವಲ್‌ನಲ್ಲಿ ಸುನಿಲ್ ಗವಾಸ್ಕರ್ ಬಾರಿಸಿದ 221 ರನ್‌ಗಳು ಇಂಗ್ಲೆಂಡ್‌ನಲ್ಲಿ ಭಾರತೀಯ ಬ್ಯಾಟರ್ ಗಳಿಂದ ಸಿಡಿಸಲಾದ ಗರಿಷ್ಠ ಸ್ಕೋರ್ ಆಗಿತ್ತು. ಈ ದಾಖಲೆಯನ್ನು 46 ವರ್ಷಗಳ ಬಳಿಕ ಗಿಲ್ ತಮ್ಮ ಅದ್ಭುತ ದ್ವಿಶತಕದ ಮೂಲಕ ಹಿಂದಿಕ್ಕಿದರು. ಅವರು ಇಂಗ್ಲೆಂಡ್ ನೆಲದಲ್ಲಿ ಅಜೇಯವಾಗಿ 260 ರನ್ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಈ ಮೂಲಕ ಗಿಲ್ ಇಂಗ್ಲಿಷ್ ನೆಲದಲ್ಲಿ ಭಾರತೀಯ ನಾಯಕನಾಗಿ ಸಿಡಿಸಲಾದ ಗರಿಷ್ಠ ಸ್ಕೋರ್ ದಾಖಲೆಯನ್ನೂ ಸರಿಗಟ್ಟಿದ್ದಾರೆ.
ಈ ಪೈಪೋಟಿಯಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಯಶಸ್ವಿ ಜೈಸ್ವಾಲ್ 87 ರನ್ ಹೊಡೆದು ಉತ್ತಮ ಆರಂಭ ನೀಡಿದರು. ಆದರೆ ಕೆಎಲ್ ರಾಹುಲ್ ಕೇವಲ 2 ರನ್ ಮತ್ತು ಕರುಣ್ ನಾಯರ್ 31 ರನ್ ಸಿಡಿಸಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಮಧ್ಯದ ಕ್ರಮದಲ್ಲಿ ರಿಷಬ್ ಪಂತ್ (65 ರನ್), ರವೀಂದ್ರ ಜಡೇಜಾ (89 ರನ್), ವಾಶಿಂಗ್ಟನ್ ಸುಂದರ್ (42 ರನ್) ಉತ್ತಮ ನೆರವಿನ ಆಟವಾಡಿದರು.
ಈ ಪೈಪೋಟಿಯಲ್ಲಿ ಗಿಲ್ ಕೇವಲ ಬ್ಯಾಟಿಂಗ್ ಮೂಲಕವೇ ಅಲ್ಲ, ನಾಯಕತ್ವದ ಮೂಲಕವೂ ಟೀಂ ಇಂಡಿಯಾಗೆ ಆಯಾಮ ನೀಡಿದ್ದಾರೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 550ರ ಮೊತ್ತವನ್ನು ದಾಟುವ ಹಾದಿಯಲ್ಲಿ ಸಾಗುತ್ತಿದೆ. ಈ ಮೂಲಕ ಮೊದಲ ಪಂದ್ಯದಲ್ಲಿ ದೊರೆತ ಸೋಲಿಗೆ ತಿರುಗೇಟು ನೀಡಲು ಟೀಂ ಇಂಡಿಯಾ ಸಜ್ಜಾಗಿದೆ.
ಇಂಗ್ಲೆಂಡ್ ನೆಲದಲ್ಲಿ ಗರಿಷ್ಠ ಸ್ಕೋರ್ ಸಾಧಕರು ಇವರು
ಶುಭಮನ್ ಗಿಲ್ : 260
ಸುನಿಲ್ ಗವಾಸ್ಕರ್:221
ರಾಹುಲ್ ದ್ರಾವಿಡ್:217
ಸಚಿನ್ ತೆಂಡೂಲ್ಕರ್: 193
ರವಿ ಶಾಸ್ತ್ರಿ: 187