Wednesday, October 22, 2025

ಸರಣಿ ಕ್ಲೀನ್ ಸ್ವೀಪ್ ಮಾಡಿದ ಗಿಲ್ ಪಡೆ: ಟೀಮ್ ಇಂಡಿಯಾಗೆ 7 ವಿಕೆಟ್​ಗಳ ಭರ್ಜರಿ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡವು 7 ವಿಕೆಟ್ ಭರ್ಜರಿ ಜಯ ಸಾಧಿಸಿದ್ದು, ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಯಶಸ್ವಿ ಜೈಸ್ವಾಲ್ (175) ಮತ್ತು ಶುಭ್ಮನ್ ಗಿಲ್ (129) ಶತಕಗಳ ನೆರವಿನಿಂದ ತಂಡವು ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಎದುರಾಳಿಯಾದ ವೆಸ್ಟ್ ಇಂಡೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ 248 ರನ್ ದಾಖಲಿಸಿತ್ತು.

270 ರನ್ ಮುನ್ನಡೆಯೊಂದಿಗೆ ಭಾರತ ತಂಡ ಫಾಲೋ ಆನ್ ಹೇರಿತು. ಎರಡನೇ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಪರ ಜಾನ್ ಕ್ಯಾಂಪ್‌ಬೆಲ್ (115) ಮತ್ತು ಶೈ ಹೋಪ್ (103) ಶತಕಗಳ ಮೂಲಕ ತಂಡವು 390 ರನ್ ಗಳಿಸಿ ಆಲೌಟ್ ಆಯಿತು.

ಭಾರತದ ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡವು ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (8) ವಿಕೆಟ್ ಕಳೆದುಕೊಂಡರು. ನಂತರ ಕೆಎಲ್ ರಾಹುಲ್ ಹಾಗೂ ಸಾಯಿ ಸುದರ್ಶನ್ 79 ರನ್ ಜೊತೆಯಾಟವಾಡಿದರು. ಸಾಯಿ ಸುದರ್ಶನ್ (39) ಮತ್ತು ಶುಭ್ಮನ್ ಗಿಲ್ (13) ಔಟ್ ಆದ ನಂತರ, ಕೆಎಲ್ ರಾಹುಲ್ (58) ಹಾಗೂ ಧ್ರುವ್ ಜುರೆಲ್ (6) ತಂಡವನ್ನು 124 ರನ್ ಗುರಿ ತಲುಪಿಸಿ 7 ವಿಕೆಟ್ ಜಯಕ್ಕೆ ಮುಂದಡಿಯಿಟ್ಟರು.

ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭ್ಮನ್ ಗಿಲ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಇದ್ದರು.

error: Content is protected !!