Friday, October 31, 2025

ಕೇಸ್ ದಾಖಲಾದ ಬೆನ್ನಿಗೇ ಠಾಣೆಗೆ ಗಿರೀಶ್ ಮಟ್ಟಣ್ಣವರ್ ಹಾಜರ್: ಬಂಧನ ಬೇಡ, ನಾನೇ ಸರೆಂಡರ್ ಆಗ್ತೀನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬೆನ್ನಿಗೇ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದು, ಠಾಣೆ ಆವರಣದಲ್ಲಿಯೇ ಸದ್ಯದ ಬೆಳವಣಿಗೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಗುಂಪಿನೊಂದಿಗೆ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಬಂದಿದ್ರು. ಈ ವೇಳೆ ನಾವು ಯಾರೂ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ. ಮಹೇಶ್ ತಿಮರೋಡಿ, ಜಯಂತ್ ಮತ್ತು ನನ್ನ ವಿರುದ್ಧ ಸೇರಿ 30 ಜನರ ಮೇಲೆ ಕೇಸ್ ಹಾಕಿದ್ದಾರೆ. ಇನ್ನು ಬಂಧನಕ್ಕಾಗಿ ಇಲಾಖೆ ಡೀಸೆಲ್ ವ್ಯರ್ಥ ಮಾಡುವುದು ಯಾಕೆ, ಬಂಧನ ಮಾಡೋದಾದ್ರೆ ಮಾಡಲಿ ಅಂತ ನಾನೇ ಬಂದಿದ್ದೇನೆ ಎಂದು ಹೇಳಿದರು.

ನಮ್ಮನ್ನ ಭಯ ಪಡಿಸುವ ಪ್ರಯತ್ನ ನಡೆದಿದೆ. ನಾವು ಇದಕ್ಕೆಲ್ಲ ಭಯ ಪಡೋದಿಲ್ಲ. ಇದುವರೆಗೂ ನನ್ನ ಮೇಲೆ ನಾಲ್ಕೈದು ಕೇಸ್ ಹಾಕಿದ್ದಾರೆ. ಮಹೇಶ್ ಶೆಟ್ಟಿ ಮೇಲೆ 10ಕ್ಕೂ ಹೆಚ್ಚು ಕೇಸ್ ಹಾಕಿದ್ದಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಕೇಸ್ ಹಾಕ್ತಾನೆ ಇದ್ದಾರೆ. ಎಲ್ಲವನ್ನು ಎದುರಿಸೋಕೆ ನಾನು ಸಿದ್ದವಿದ್ದೇವೆ ಎಂದು ಅವರು ಹೇಳಿದರು.
ನಿನ್ನೆ ಬ್ರಹ್ಮಾವರ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಬಂದಿದ್ದ ಸಂದರ್ಭ ಗಿರೀಶ್ ಮಟ್ಟಣ್ಣವರ್ ಹಾಗೂ ಇತರರು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!