ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಂತಿಯಾಗುತ್ತಿದ್ದ ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯನ್ನು ವೈದ್ಯರು ನಿರ್ಲಕ್ಷ್ಯ ಮಾಡಿದ್ದರಿಂದ ಪ್ರಾಣಚೆಲ್ಲಿದ್ದಾಳೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್.ಡಿ ಕೋಟೆಯ ಸೇಂಟ್ ಮೆರಿಸ್ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಏಳು ವರ್ಷದ ಬಾಲಕಿ ತನುಷ್ಕಾ ಮೃತಪಟ್ಟಿದ್ದಾಳೆ.
ಜಿಲ್ಲೆಯ ಬೆಳಗನಹಳ್ಳಿ ಗ್ರಾಮದ ಶಿವರಾಜ್ ದಂಪತಿ ಪುತ್ರಿ ತನುಷ್ಕಾ ವಾಂತಿ ಮಾಡಿಕೊಳ್ಳುತ್ತಿದ್ದಾಳೆ ಎಂದು ಪೋಷಕರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಸ್ಪತ್ರೆಯಲ್ಲಿ ನೈಟ್ಶಿಫ್ಟ್ನಲ್ಲಿದ್ದ ಡಾಕ್ಟರ್ಸ್ ಬಾಲಕಿಗೆ ಚಿಕಿತ್ಸೆ ನೀಡಿದ್ದರು. ವಾಂತಿಯಾದರು ಲವಲವಿಕೆಯಿಂದ ಇದ್ದ ಮಗು ದಿಢೀರ್ ಎಂದು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಇದಕ್ಕೆ ಕಾರಣ ತಿಳಿದುಬಂದಿಲ್ಲ.
ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ಪೋಷಕರು ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಟಿ.ಹೆಚ್.ಓ ರವಿಕುಮಾರ್ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.