ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರದಂದು ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗೆ ಅನೇಕ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಿತು. ಈ ಯೋಜನೆಗಳು ಎಲ್ಲರಿಗೂ ತಲುಪಬೇಕು, ಮುಖ್ಯವಾಗಿ ಬಿಜೆಪಿಯೇತರ ರಾಜ್ಯಗಳಿಗೂ ಸರಿಯಾಗಿ ತಲುಪಿಸಬೇಕು
ಎಂದು ಪ್ರಧಾನಿ ಮೋದಿ ಅವರು ಸಂಸದರಿಗೆ ಸೂಚನೆ ನೀಡಿದರು.
ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ಬಿಜೆಪಿಯೇತರ ರಾಜ್ಯಗಳ ಜನರೊಂದಿಗೆ ಸಂಪರ್ಕ ಸಾಧಿಸಲು ವಿವಿಧ ಕಾರ್ಯಕ್ರಮಗಳನ್ನು ಸ್ಥಾಪಿಸಲು ಹೆಚ್ಚು ಗಮನಹರಿಸಬೇಕು. ಎಲ್ಲಾ ಧಾರ್ಮಿಕ ಹಬ್ಬಗಳನ್ನು ಸಾರ್ವಜನಿಕರೊಂದಿಗೆ ಆಚರಿಸಿ ಮತ್ತು ಒಗ್ಗಟ್ಟಾಗಿ ನಿಲ್ಲಬೇಕು. ಅಲ್ಲದೇ ಮುಂಬರುವ 2024ರ ಚುನಾವಣೆಗೆ ಎಲ್ಲರೂ ಸಿದ್ಧರಾಗಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ ಎಂದು ಮೂಲವೊಂದುತಿಳಿಸಿದೆ.
ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿ ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಮತ್ತು ಲಕ್ಷ್ವದೀಪ್‌ನ 48 ಸಂಸದರು ಭಾಗಿಯಾಗಿದ್ದರು. ಮುಖ್ಯವಾಗಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ ಮುರಳೀಧರನ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಡಾ.ಕೆ.ಲಕ್ಷ್ಮಣ್, ಜಿ. ಕಿಶನ್ ರೆಡ್ಡಿ, ವನತಿ ಶ್ರೀನಿವಾಸನ್ ಮತ್ತು ಇತರ ಎನ್‌ಡಿಎ ಸಂಸದರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕ್ಲಸ್ಟರ್-3 ಸಭೆ:
ಈ ಸಭೆಗೂ ಮುನ್ನ ಪ್ರಧಾನಿ ಬುಧವಾರ ಮಹಾರಾಷ್ಟ್ರ ಭವನದಲ್ಲಿ ಉತ್ತರ ಪ್ರದೇಶದ ಕಾಶಿ ಮತ್ತು ಅವಧ್ ಪ್ರದೇಶದ 48 ಎನ್‌ಡಿಎ ಸಂಸದರೊಂದಿಗೆ ಕ್ಲಸ್ಟರ್-3 ಸಭೆ ನಡೆಸಿದರು.ಈ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಅನುಪ್ರಿಯಾ ಪಟೇಲ್ ಮತ್ತು ಮಹೇಂದ್ರ ನಾಥ್ ಪಾಂಡೆ ಉಪಸ್ಥಿತರಿದ್ದರು.
ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಯ ಸಿದ್ಧತೆಗಳ ಭಾಗವಾಗಿ ಸೋಮವಾರದಂದು, ಪಿಎಂ ಮೋದಿ ಪಶ್ಚಿಮ ಉತ್ತರ ಪ್ರದೇಶ, ಬುಂದೇಲ್‌ಖಂಡ್ ಮತ್ತು ಬ್ರಜ್ ಪ್ರದೇಶದ ಎನ್‌ಡಿಎ ಸಂಸದರೊಂದಿಗೆ ಸಭೆ ನಡೆಸಿದ್ದರು. ಜನರೊಂದಿಗೆ ಉತ್ತಮ ಸಂಪರ್ಕ ಹೊಂದಲು, ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಲು ಹೇಳಿದರು. ಅದಾಗ್ಯೂ ತಳಮಟ್ಟದಲ್ಲಿ ಪ್ರಭಾವ ಬೀರುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲು ತಿಳಿಸಿರುವುದಾಗಿ ಮೂಲಗಳು ಹೇಳಿವೆ.