ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್ ಹೀರೋ ರವಿ ಮೋಹನ್ (ಜಯಂ ರವಿ) ಮತ್ತು ಅವರ ಪತ್ನಿ ಆರತಿ ನಡುವಿನ ವಿಚ್ಛೇದನ ಸಂಬಂಧ ರಾಜೀ ಸಂಧಾನಕ್ಕಾಗಿ ಅರ್ಜಿ ಸಲ್ಲಿಸಿದ್ದ ಆರತಿ ಇದೀಗ ಪತಿಯಿಂದ 40 ಲಕ್ಷ ರೂ. ಜೀವನಾಂಶ ಕೊಡಿಸಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ.
ನ್ಯಾಯಾಲಯದಲ್ಲಿ ಜಯಂ ರವಿ ಪತ್ನಿ ಆರತಿಯಿಂದ ವಿಚ್ಚೇದನ ಪಡೆಯಲು ಅರ್ಜಿ ಸಲ್ಲಿಸಿದ್ದು, ತಮಗೆ ಪತ್ನಿ ಜೊತೆ ವಾಸಿಸಲು ಸಾಧ್ಯವೇ ಇಲ್ಲ ಎಂದು ಅರ್ಜಿಯಲ್ಲಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ಆರತಿ ಸಲ್ಲಿಸಿರುವ ರಾಜಿ ಸಂಧಾನದ ಮನವಿಯನ್ನು ತಿರಸ್ಕರಿಸುವಂತೆ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇದೆಲ್ಲದರ ನಡುವೆ ಪತಿಯಿಂದ 40 ಲಕ್ಷ ರೂ. ಜೀವನಾಂಶ ಬೇಕು ಎಂದು ಮನವಿ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ನ್ಯಾಯಾಲಯವು ಇಬ್ಬರಿಗೂ ತಮ್ಮ ಅರ್ಜಿಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಜೂ.12 ಕ್ಕೆ ನಿಗದಿಪಡಿಸಿದೆ.
ಜಯಂ ರವಿ ಹಾಗೂ ಆರತಿ 2009ರಲ್ಲಿ ವಿವಾಹವಾಗಿ, 18 ವರ್ಷಗಳ ದಾಂಪತ್ಯದ ನಂತರ ಬೇರೆಯಾಗಿದ್ದಾರೆ. ಇಬ್ಬರು ಬೇರ್ಪಡುತ್ತಿರುವುದಾಗಿ ಜಯಂ ರವಿ ಕಳೆದ ವರ್ಷ ಘೋಷಿಸಿದ್ದರು.
ಇತ್ತೀಚೆಗೆ ರವಿ ಅವರು ಗಾಯಕಿ ಕೆನಿಶಾ ಜೊತೆ ಮದುವೆಯೊಂದರಲ್ಲಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಆರತಿ ತುಂಬಾ ಭಾವುಕರಾಗಿ, 18 ವರ್ಷಗಳ ಕಾಲ ನನ್ನೊಂದಿಗಿದ್ದ ರವಿ ಈಗ ದೂರ ಸರಿದಿದ್ದಾರೆ. ಮಕ್ಕಳ ಜವಾಬ್ದಾರಿ ನನ್ನ ಹೆಗಲ ಮೇಲಿದೆ ಎಂದಿದ್ದರು.