August 24, 2026
Monday, August 24, 2026
spot_img

ಉತ್ತರ ಕರ್ನಾಟಕದ ದೇವಾಲಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ: ಶ್ರೀ ಹನುಮಂತನಾಥ ಮಹಾಸ್ವಾಮೀಜಿ

ಹೊಸದಿಗಂತ ವರದಿ ಬೆಳಗಾವಿ :

ಬೆಳಗಾವಿ ದಕ್ಷಿಣ ಕರ್ನಾಟಕದ ದೇವಾಲಯಗಳ ಮಾದರಿಯಲ್ಲಿ ಉತ್ತರ ಕರ್ನಾಟಕದ ದೇವಾಲಯಗಳನ್ನೂ ಸ್ವಚ್ಛತೆ, ಶಿಸ್ತುಬದ್ಧ ಪೂಜಾ ಪದ್ಧತಿ ಹಾಗೂ ಭಕ್ತಸೇವೆಯ ಮೂಲಕ ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ ಎಂದು ಕುಂಚಿಟಿಗರ ಸಂಸ್ಥಾನ ಮಠದ ಜಗದ್ಗುರು ಶ್ರೀ ಹನುಮಂತನಾಥ ಮಹಾಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ಹಾಗೂ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನ (ಹಿರೇಮಠ-ಹುಕ್ಕೇರಿ) ಇವರ ಆಶ್ರಯದಲ್ಲಿ ಬೆಳಗಾವಿಯ ಲಕ್ಷ್ಮೀ ಟೆಕ್ಕಡಿಯಲ್ಲಿರುವ ಶ್ರೀ ಹಿರೇಮಠದಲ್ಲಿ ಜುಲೈ 21ರಿಂದ 28ರವರೆಗೆ ಆಯೋಜಿಸಲಾಗಿರುವ ಎಂಟು ದಿನಗಳ ಅರ್ಚಕರ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇವಾಲಯಗಳ ಮೂಲಕ ಶ್ರದ್ಧೆಯ ಉದಾತ್ತೀಕರಣ “ಜನರ ಶ್ರದ್ಧೆ ಮತ್ತು ಭಕ್ತಿ ದೇವಾಲಯಗಳ ಮೂಲಕ ಉದಾತ್ತೀಕರಣಗೊಳ್ಳುತ್ತದೆ. ಪ್ರತಿಮಾ ಆರಾಧನೆಯ ಮೂಲಕ ಸಾಮಾನ್ಯ ಜನರು ದೈವೀಕ ಪ್ರಜ್ಞೆಯನ್ನು ಹೊಂದುತ್ತಾರೆ. ದಕ್ಷಿಣ ಕರ್ನಾಟಕದ ದೇವಾಲಯಗಳು ಸ್ವಚ್ಛತೆ ಹಾಗೂ ಕ್ರಮಬದ್ಧ ಪೂಜಾ ಆಚರಣೆಗಳಿಂದ ಜನಮನ್ನಣೆ ಗಳಿಸಿವೆ. ಅದೇ ಮಾದರಿಯಲ್ಲಿ ಉತ್ತರ ಕರ್ನಾಟಕದ ದೇವಾಲಯಗಳೂ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ” ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ‘ಪೂಜಾ ಪದ್ಧತಿ ಕೈಪಿಡಿ’ ಎಂಬ ಕಿರು ಕೃತಿಯನ್ನು ಪೂಜ್ಯರು ಲೋಕಾರ್ಪಣೆ ಮಾಡಿದರು.

ಮಂತ್ರೋಚ್ಚಾರಣೆಯಲ್ಲಿ ಶುದ್ಧತೆ ಅಗತ್ಯ :

ಕಾರಂಜಿ ಮಠದ ಪರಮಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, “ಅರ್ಚಕರು ಪೂಜಾ ವಿಧಾನ, ವೇಷಭೂಷಣ ಹಾಗೂ ಮಂತ್ರೋಚ್ಚಾರಣೆಯಲ್ಲಿ ಶುದ್ಧತೆ ಮತ್ತು ಸ್ಪಷ್ಟತೆಯನ್ನು ಕಾಪಾಡಿಕೊಳ್ಳಬೇಕು. ಮಂತ್ರೋಚ್ಚಾರಣೆಯಲ್ಲಿ ದೋಷಗಳು ಉಂಟಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯ” ಎಂದು ಹೇಳಿದರು. ಮುಖ್ಯ ವಕ್ತಾರ ಮನೋಹರ ಮಠಜಿ ಮಾತನಾಡಿ, “ಅರ್ಚಕನು ದೇವರು ಮತ್ತು ಭಕ್ತರ ನಡುವಿನ ಕೊಂಡಿಯಾಗಿದ್ದಾನೆ. ಶುದ್ಧ ಅಂತಃಕರಣ, ಪ್ರಾಮಾಣಿಕತೆ ಹಾಗೂ ಆದರ್ಶ ನಡೆ-ನುಡಿಗಳ ಮೂಲಕ ಸೇವೆ ಸಲ್ಲಿಸಿದಾಗ ಮಾತ್ರ ದೇವಾಲಯ, ಭಕ್ತರು ಹಾಗೂ ಸಮಾಜದ ಉನ್ನತಿಗೆ ಕಾರಣನಾಗುತ್ತಾನೆ” ಎಂದರು.

ಇದನ್ನೂ ಓದಿ:

ಸಮುದಾಯಗಳ ಒಗ್ಗಟ್ಟಿಗೆ ಶ್ಲಾಘನೆ:

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಬೆಳಗಾವಿ ಜಿಲ್ಲೆಯ ವಿವಿಧ ಸಮುದಾಯಗಳ ಅರ್ಚಕರನ್ನು ಒಂದೇ ವೇದಿಕೆಗೆ ಕರೆತಂದು ತರಬೇತಿ ಶಿಬಿರ ಯಶಸ್ವಿಗೊಳಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮವನ್ನು ನಗರ ಸಂಘಚಾಲಕ ಬಾಳಣ್ಣ ಕಗ್ಗಣಗಿ ಉದ್ಘಾಟಿಸಿದರು.ಉದ್ಯಮಿ ಪಿ.ಎಸ್. ಹಿರೇಮಠ, ವೈದ್ಯರಾದ ಡಾ. ಎಂ.ಬಿ. ಬೆಲ್ಲದ ಹಾಗೂ ಡಾ. ಕೇದಾರೇಶ್ವರ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

ಬಸವರಾಜ ಬಾಗುಜಿ ನಿರೂಪಣೆ ನಡೆಸಿಕೊಟ್ಟರೆ, ವಿಜಯ ಜಾದವ್ ಶಾಂತಿ ಮಂತ್ರ ಪಠಿಸಿದರು. ಬಸವರಾಜ ಹಳಿಂಗಳಿ ವಂದಿಸಿದರು. ಹಿರೇಮಠದ ಗುರುಕುಲದ ವಿದ್ಯಾರ್ಥಿಗಳು ನೆರವೇರಿಸಿದ ‘ಗಂಗಾರತಿ’ಯೊಂದಿಗೆ ಕಾರ್ಯಕ್ರಮಕ್ಕೆ ಭಕ್ತಿಪೂರ್ವಕ ಚಾಲನೆ ದೊರೆಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !