ಹೊಸದಿಗಂತ ವರದಿ ಚಿತ್ರದುರ್ಗ:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ವಾಕಾಂಕ್ಷಿ ಯೋಜನೆ (ಪೈಲೆಟ್ ಪ್ರಾಜೆಕ್ಟ್) ಸ್ವಾಗತಾರ್ಹವಾಗಿದ್ದು, ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿ ಕೋಟೆನಾಡು ಜಿಲ್ಲಾ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕೃಷಿ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಹಾತ್ವಾಕಾಂಕ್ಷಿ ಯೋಜನೆ (ಪೈಲೆಟ್ ಪ್ರಾಜೆಕ್ಟ್) ಸ್ವಾಗತಾರ್ಹವಾಗಿದೆ. ಆದರೆ, ಇದರ ಬಗ್ಗೆ ಕೃಷಿ ಪರಿಕರ ಮಾರಾಟಗಾರರು ಮತ್ತು ರೈತರಿಗೆ ಸಮರ್ಪಕ ಮಾಹಿತಿ ಇಲ್ಲ. ಈ ಆಪ್ ಪ್ರಯೋಗಿಕವಾಗಿ ಬಳಕೆ ಮಾಡಲು ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಹೊಸದಾಗಿ ಪಿಪಿಎಸ್ ಮಿಶನ್‌ಗೆಅಳವಡಿಸಿರುವ ಎಫ್‌ಎಫ್‌ಎಸ್ ಆಪ್‌ನಲ್ಲಿ ಮಾಹಿತಿಯು ಎಲ್ಲಾ ರೈತರಿಗೆ ಸಮರ್ಪಕವಾಗಿ ತಿಳಿದಿಲ್ಲ. ಹಾಗಾಗಿ ಈ ಯೋಜನೆ ಕಾರ್ಯರೂಪಕ್ಕೆ ತರಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಹುತೇಕ ಜನ ರೈತರಲ್ಲಿ ಆಂಡ್ರಾಯಿಡ್ ೫-ಜಿ ಮೊಬೈಲ್ ಪೋನ್‌ಗಳು ಇರುವುದಿಲ್ಲ. ಇದರಿಂದಾಗಿ ಪ್ರತಿನಿತ್ಯ ರೈತರ ಹತ್ತಿರ ಈ ವಿಚಾರವಾಗಿ ವಾಗ್ವಾದ ಮಾಡಿ ತಿಳಿಹೇಳಲು ಆಗುವುದಿಲ್ಲ. ಇದರಿಂದ ಗೊಂದಲ ಉಂಟಾಗುತ್ತಿದೆ. ಹಾಗಾಗಿ ರೈತರ ಆಧಾರ್ ಹಾಗೂ ಮೊಬೈಲ್ ನಂಬರ್‌ಗಳನ್ನು ಪುಸ್ತಕದಲ್ಲಿ ಬರೆದು ರಸಗೊಬ್ಬರ ವಿತರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಇದನ್ನೂ ಓದಿ:
ಈಗ ಮುಂಗಾರು ಹಂಗಾಮು ಪ್ರಾರಂಭವಾಗಿರುವುದರಿಂದ ರೈತರಿಗೆ ಗೊಬ್ಬರದ ಖರೀದಿಯು ಸುಸೂತ್ರವಾಗಿಸಲು ಈಗಿರುವ ಎಫ್‌ಎಫ್‌ಎಸ್ ಮೊಬೈಲ್ ಆಪ್ ಜೊತೆಗೆ ಹಳೆಯ ರಸಗೊಬ್ಬರ ಪಿಓಎಸ್ ಮಾರಾಟ ವ್ಯವಸ್ಥೆಯನ್ನು ಮುಂದುವರೆಸಬೇಕಿದೆ. ಎನ್‌ಪಿಕೆ ಮಿಶ್ರಣಗಳ ಪೂರ್ಣ ಶ್ರೇಣಿಗಳು ಹೊಸ ಎಫ್‌ಎಫ್‌ಎಸ್ ಮೊಬೈಲ್ ಆಪ್‌ನಲ್ಲಿ ಕಾಣಿಸುತ್ತಿಲ್ಲ. ಇದರಿಂದಾಗಿ ರೈತರು ತಮಗೆ ಬೇಕಾದ ರಸಗೊಬ್ಬರಗಳನ್ನು ಪಡೆಯಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಈಗಿರುವ ಎಫ್‌ಎಫ್‌ಎಸ್ ಮೊಬೈಲ್ ಆಪ್ ಜೊತೆಗೆ ಹಳೆಯ ರಸಗೊಬ್ಬರ ಪಿಓಎಸ್ ಮಾರಾಟ ವ್ಯವಸ್ಥೆ ಮುಂದುವರೆಸುವಂತೆ ಆಗ್ರಹಿಸಿದರು.
ರೈತರು ಸರ್ಕಾರ ಜಾರಿ ಮಾಡಿರುವ ಆಪ್ ಬಳಕೆಯ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ತಮಗೆ ಬೇಕಾದ ಗೊಬ್ಬರಗಳನ್ನು ಪಕ್ಕದ ಜಿಲ್ಲೆಗಳಾದ ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿಯಿಂದ ತರುತ್ತಿದ್ದಾರೆ. ಇದರಿಂದ ನಮ್ಮ ವ್ಯಾಪಾರಕ್ಕೆ ಧಕ್ಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಹಿಂದಿನ ಪದ್ದತಿಯಂತೆ ರಸಗೊಬ್ಬರ ಖರೀದಿ ಮಾಡಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೋಟೆನಾಡು ಜಿಲ್ಲಾ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ನಿರಂಜನಮೂರ್ತಿ, ಉಪಾಧ್ಯಕ್ಷ ಗಂಗಾಧರ್, ಸಂಘಟನಾ ಕಾರ್ಯದರ್ಶಿ ರಘು ಬಿ, ಕಾರ್ಯದರ್ಶಿ ನಾಗರಾಜ್, ಖಂಜಾಚಿ ಲಿಂಗೇಶ್, ಚಿತ್ರದುರ್ಗ ತಾಲ್ಲೂಕು ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಚಳ್ಳಕೆರೆ ಅಧ್ಯಕ್ಷ ಜಗನ್ನಾಥ್, ಹೊಳಲ್ಕೆರೆ ಅಧ್ಯಕ್ಷ ಮಾಕಂ ರಾಮಶಟ್ಟಿ, ಹಿರಿಯೂರು ಅಧ್ಯಕ್ಷ ಹರ್ಷ, ಮೊಳಕಾಲ್ಮೂರು ಅಧ್ಯಕ್ಷ ರವಿಕುಮಾರ್, ಹೊಸದುಗ ಅಧ್ಯಕ್ಷ ತ್ಯಾಗರಾಜ್ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಬಿತ್ತನೆ ಬೀಜ ಕೀಟನಾಶಕ ಮತ್ತು ರಸಗೊಬ್ಬರ ಮಾರಾಟಗಾರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



