ಹೊಸದಿಗಂತ ಡಿಜಿಟಲ್ ಡೆಸ್ಕ್:
ನೋಡೋದಕ್ಕೆ ಸುಂದರವಾಗಿ ಹಾಗೂ ಆಕರ್ಷಕವಾಗಿ ಕಾಣಲಿ ಎನ್ನುವ ಕಾರಣಕ್ಕೆ ಬೆಂಗಳೂರು ನಗರದಲ್ಲಿ ಗಾಜಿನ ರಚನೆಗಳಿರುವ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ, ಆದರೆ ಇದು ಸುರಕ್ಷಿತವಲ್ಲ ಎಂದು ಬಿಬಿಎಂಪಿ ಹೇಳಿದೆ.
ಈ ಕಟ್ಟಡಗಳಲ್ಲಿ ಅಗ್ನಿ ಅವಘಡಗಳಿಗೆ ಸಂಬಂಧಿಸಿದ ಯಾವುದೇ ವಿಶೇಷ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ. ನಿನ್ನೆಯಷ್ಟೇ ಕೋರಮಂಗಲದ ಕೆಫೆಯೊಂದರಲ್ಲಿ ನಾಲ್ಕು ಸಿಲಿಂಡರ್ ಸ್ಫೋಟವಾಗಿ ಬೆಂಕಿ ಹೊತ್ತಿತ್ತು.
ಜೀವ ಉಳಿಸಿಕೊಳ್ಳಲು ಕೆಲಸಗಾರರೊಬ್ಬರು ಕಟ್ಟಡದಿಂದ ಹಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ನಂತರ ಬಿಬಿಎಂಪಿ ಗಾಜಿನ ಕಟ್ಟಡಗಳ ಕುರಿತು ಸಮೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಗಾಜಿನ ಕಿಟಕಿಗಳು, ಕಟ್ಟಡಗಳ ನಿರ್ಮಾಣ ತಡೆಯಲು ನಿಯಮಗಳಿಲ್ಲ, ಈ ರೀತಿ ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂದರ್ಭದಲ್ಲಿ ಕಿಟಕಿ ಗಾಜುಗಳು ಒಡೆದುಹೋಗುತ್ತವೆ, ಇಡೀ ಕಟ್ಟಡದ ಸಂಪೂರ್ಣ ರಚನೆಯು ಬಿರುಕುಗಳಿಗೆ ಒಳಗಾಗುತ್ತದೆ. ಗಾಜು ಶಾಖವನ್ನು ಹೀರಿಕೊಳ್ಳುತ್ತವೆ ಎಂದಿದ್ದಾರೆ.