ಜಾಗತಿಕ ಹೂಡಿಕೆದಾರರ ಸಮಾವೇಶ: ಟೋಕಿಯೋ ಕನ್ನಡ ಬಳಗಕ್ಕೆ ಆಹ್ವಾನ ನೀಡಿದ ಸಚಿವ ನಿರಾಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ್‌ ಆರ್‌. ನಿರಾಣಿ, ಜಪಾನ್‌ಗೆ ಭೇಟಿ ನೀಡಿದ್ದಾರೆ.
ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಲು ಸಚಿವ ನಿರಾಣಿ ನೇತೃತ್ವದ ನಿಯೋಗ ಜಪಾನ್‌ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭ ಟೋಕಿಯೋ ಕನ್ನಡ ಬಳಗ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಆಹ್ವಾನ ನೀಡಿದರು.

ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ, ಜಪಾನ್‌ಗೆ ಸಂಬಂಧಿಸಿದಂತೆ, ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್‌ ಕೈಗಾರಿಕಾ ಟೌನ್‌ಶಿಪ್ ಸ್ಥಾಪಿಸಲಾಗಿದೆ. ಅದಕ್ಕಾಗಿ 519.55 ಎಕರೆ ಭೂಮಿ ಮೀಸಲಿಡಲಾಗಿದ್ದು, ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಪಾನಿನ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದುಎಂದು ನಿರಾಣಿ ಹೇಳಿದರು.

ಎಲ್ಲಾ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳ ನೇರ ಹೂಡಿಕೆಗೆ ಉತ್ತೇಜಿಸುವ ಮೂಲಕ ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶವಿದ್ದು, ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ವಿದೇಶಿ ನೇರ ಹೂಡಿಕೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.38 ಎಂದು ಅವರು ವಿವರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುವ ಮಟ್ಟಕ್ಕೇರಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದ್ದು, ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಳೆದ 3-4 ತಿಂಗಳಿಂದೀಚೆಗೆ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ ಮೊತ್ತದ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ. ಇದು ರಾಜ್ಯದ ಮೇಲೆ ದೊಡ್ಡ ದೊಡ್ಡ ಕಂಪನಿಗಳು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿಎಂದು ಹೇಳಿದರು.

ಟೋಕಿಯೊ ಕನ್ನಡ ಬಳಗದ ಗಣೇಶ್‌ ಕೃಷ್ಣಯ್ಯ, ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಮಯಾಂಕ್ ಜೋಶಿ ಮತ್ತು ಭಾರತೀಯ ರಾಯಭಾರಿ ಕಚೇರಿಯ ಮೊದಲ ಕಾರ್ಯದರ್ಶಿ ಮನೋಜ್ ಸಿಂಗ್ ನೇಗಿ, ಹಾಗೂ ಕನ್ನಡ ಬಳಗದ ಸದಸ್ಯರು ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!