January20, 2026
Tuesday, January 20, 2026
spot_img

WHO ವೇದಿಕೆಯಲ್ಲಿ ಸಾಂಪ್ರದಾಯಿಕ ಔಷಧಕ್ಕೆ ಜಾಗತಿಕ ಗುರುತು: ಅಶ್ವಗಂಧ ಅಂಚೆ ಚೀಟಿ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಂಪ್ರದಾಯಿಕ ಭಾರತೀಯ ಔಷಧ ಪದ್ಧತಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತೊಮ್ಮೆ ಗೌರವ ದೊರೆತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಶೃಂಗಸಭೆಯಲ್ಲಿ ಅಶ್ವಗಂಧವನ್ನು ಪ್ರತಿನಿಧಿಸುವ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳ್ಳುವ ಮೂಲಕ ಭಾರತೀಯ ಮೂಲಿಕೆಯ ಮಹತ್ವವನ್ನು ಜಗತ್ತಿನ ಮುಂದೆ ತಂದಿಟ್ಟಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಾಂಪ್ರದಾಯಿಕ ಔಷಧ ಪದ್ಧತಿಗೆ ತಕ್ಕಮಟ್ಟಿನ ಮಾನ್ಯತೆ ಇನ್ನೂ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಶತಮಾನಗಳಿಂದ ಭಾರತೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ಬಳಕೆಯಲ್ಲಿರುವ ಅಶ್ವಗಂಧವು ವಿಜ್ಞಾನಾಧಾರಿತ ಅಧ್ಯಯನಗಳ ಮೂಲಕ ಸಾರ್ವಜನಿಕ ವಿಶ್ವಾಸವನ್ನು ಇನ್ನಷ್ಟು ಗಳಿಸಬೇಕಿದೆ ಎಂದು ಪ್ರಧಾನಿ ಹೇಳಿದರು. ಕೋವಿಡ್-19 ಮಹಾಮಾರಿಯ ಸಂದರ್ಭದಲ್ಲಿ ಅಶ್ವಗಂಧದ ಜಾಗತಿಕ ಬೇಡಿಕೆ ಹೆಚ್ಚಾಗಿದ್ದು, ಹಲವು ರಾಷ್ಟ್ರಗಳು ಇದರ ಬಳಕೆಯನ್ನು ಸ್ವೀಕರಿಸಿರುವುದನ್ನು ಅವರು ನೆನಪಿಸಿದರು.

ಆರೋಗ್ಯ ತಜ್ಞರ ಪ್ರಕಾರ, ಅಶ್ವಗಂಧವು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಟ್ಟೆಯ ಸಮಸ್ಯೆಗಳು, ಮಲಬದ್ಧತೆ ಹಾಗೂ ಆಂತರಿಕ ಸೋಂಕುಗಳ ನಿವಾರಣೆಗೆ ಇದು ಸಹಕಾರಿ ಎನ್ನಲಾಗಿದೆ. ಸಂಧಿವಾತದ ನೋವು ಕಡಿಮೆ ಮಾಡುವಲ್ಲಿ ಹಾಗೂ ಎಲುಬುಗಳನ್ನು ಬಲಪಡಿಸುವಲ್ಲಿ ಇದರ ಬಳಕೆ ಲಾಭದಾಯಕ ಎಂದು ಹೇಳಲಾಗುತ್ತಿದೆ.

ಇದಲ್ಲದೆ ಕಣ್ಣು, ಗಂಟಲು ಸಂಬಂಧಿತ ತೊಂದರೆಗಳು ಹಾಗೂ ದೀರ್ಘಕಾಲದ ದೌರ್ಬಲ್ಯದಿಂದ ಬಳಲುವವರಿಗೆ ಅಶ್ವಗಂಧ ಉಪಯುಕ್ತವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ಅಗತ್ಯವಿದೆ ಎಂಬ ಸಂದೇಶವನ್ನು ಈ ಶೃಂಗಸಭೆ ಸ್ಪಷ್ಟವಾಗಿ ನೀಡಿದೆ.

Must Read