ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿ, ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ $300 ಮಿಲಿಯನ್‌ಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿದ ‘ಅಬ್ಸೆಷನ್’ (Obsession) ಹಾರರ್ ಸಿನಿಮಾ ಕೊನೆಗೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಲಗ್ಗೆ ಇಟ್ಟಿದೆ. ಯೂಟ್ಯೂಬರ್ ಕರಿ ಬಾರ್ಕರ್ ನಿರ್ದೇಶನದ ಈ ಚಿತ್ರ ಈಗ ‘ಅಮೆಜಾನ್ ಪ್ರೈಮ್ ವಿಡಿಯೋ’ ಮತ್ತು ‘ಆಪಲ್ ಟಿವಿ’ಯಲ್ಲಿ ಲಭ್ಯವಿದೆ.
ವೀಕ್ಷಕರಿಗೆ ನಿರಾಸೆ ಮೂಡಿಸಿದ ‘ಬಾಡಿಗೆ’ ನಿಯಮ!
ಸದ್ಯಕ್ಕೆ ಈ ಸಿನಿಮಾವನ್ನು ಚಂದಾದಾರರು ಉಚಿತವಾಗಿ ನೋಡಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಪ್ಲಾಟ್‌ಫಾರ್ಮ್‌ಗಳಲ್ಲಿ ಚಿತ್ರವನ್ನು ಖರೀದಿಸಲು $24.99 ಹಾಗೂ ಬಾಡಿಗೆಗೆ ಪಡೆಯಲು $19.99 ನಿಗದಿಪಡಿಸಲಾಗಿದೆ. ಆದರೆ, ಎಲ್ಲರಿಗೂ ಮುಕ್ತವಾಗಿ ಸಿಗುವ ಪೂರ್ಣ ಪ್ರಮಾಣದ ಉಚಿತ ಒಟಿಟಿ ಸ್ಟ್ರೀಮಿಂಗ್ ದಿನಾಂಕವನ್ನು ಚಿತ್ರತಂಡ ಈ ತಿಂಗಳ ಕೊನೆಯಲ್ಲಿ ಪ್ರಕಟಿಸಲಿದೆ.
ಸಿಹಿ ಸುದ್ದಿ: ಬೋನಸ್ ಕಂಟೆಂಟ್ ಲಭ್ಯ
ಹಣ ಪಾವತಿಸಿ ವೀಕ್ಷಿಸುವವರಿಗೆ ಚಿತ್ರತಂಡ ಬಿಹೈಂಡ್ ದಿ ಸೀನ್ಸ್ ಮತ್ತು ನಿರ್ದೇಶಕರ ವಿಶೇಷ ಕಾಮೆಂಟರಿ ಒಳಗೊಂಡ ಬೋನಸ್ ಕಂಟೆಂಟ್‌ಗಳನ್ನು ನೀಡುತ್ತಿದೆ. ಜುಲೈ 14ರಂದು ಇದರ ಡಿವಿಡಿ ಹಾಗೂ ಬ್ಲೂ-ರೇ ಬಿಡುಗಡೆಯಾಗಲಿದ್ದು, ‘ಪೀಕಾಕ್’ ಒಟಿಟಿಯಲ್ಲೂ ಸಿನಿಮಾ ಸ್ಟ್ರೀಮ್ ಆಗುವ ಸಾಧ್ಯತೆಯಿದೆ.
6 ಕೋಟಿ ಬಜೆಟ್, 3,000 ಕೋಟಿ ಗಳಿಕೆ!
ಕೇವಲ $700 ಸಾವಿರ (ಸುಮಾರು 5-6 ಕೋಟಿ ರೂ.) ಬಜೆಟ್‌ನಲ್ಲಿ ತಯಾರಾದ ಈ ಚಿತ್ರ, ಕೇವಲ ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದ (Word of mouth) ಜಾಗತಿಕವಾಗಿ $370 ಮಿಲಿಯನ್‌ಗೂ ಅಧಿಕ ಗಳಿಕೆ ಮಾಡಿದೆ. ಟೊರೊಂಟೊ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ತಕ್ಷಣ ಫೋಕಸ್ ಫೀಚರ್ಸ್ ಸಂಸ್ಥೆ ಇದನ್ನು $15 ಮಿಲಿಯನ್ ನೀಡಿ ಖರೀದಿಸಿತ್ತು. ಪ್ರಸ್ತುತ ಇದು ಫೋಕಸ್ ಫೀಚರ್ಸ್ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.



