Wednesday, October 22, 2025

ಭತ್ತದ ತಳಿ ಸಂಶೋಧನೆಗೆ ಜಾಗತಿಕ ಸ್ಪರ್ಶ: ಫಿಲಿಪೈನ್ಸ್‌ IRRI ಜೊತೆ ಕರ್ನಾಟಕದ ಮೈತ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ರಾಜ್ಯದಲ್ಲಿ ಭತ್ತದ ತಳಿಗಳ ಆಧುನಿಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೊಸ ಆಯಾಮ ನೀಡಲು ಮಂಡ್ಯ ಕೃಷಿ ವಿಶ್ವವಿದ್ಯಾಲಯವು ಫಿಲಿಪೈನ್ಸ್‌ನ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ನಿಯೋಗವು ಫಿಲಿಪೈನ್ಸ್‌ನ ಮನಿಲಾದಲ್ಲಿರುವ IRRI ಕೇಂದ್ರಕ್ಕೆ ಭೇಟಿ ನೀಡಿ ಒಡಂಬಡಿಕೆಗೆ ಸಹಿ ಹಾಕಿತು.

ಈ ಒಪ್ಪಂದದ ಮೂಲಕ ರಾಜ್ಯದ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಯ ವಿಭಿನ್ನ ಭೌಗೋಳಿಕ ಪರಿಸರಕ್ಕೆ ಹೊಂದಿಕೊಳ್ಳುವ, ನೆರೆ ಮತ್ತು ಬರ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲ ತಳಿಗಳ ಸಂಶೋಧನೆಗೆ ಒತ್ತು ನೀಡಲಾಗಿದೆ.

ವಿವಿಧ ಜೈವಿಕ ಮತ್ತು ಅಜೈವಿಕ ಒತ್ತಡಗಳಿಗೆ ನಿರೋಧಕತೆ ಇರುವ ಭತ್ತದ ತಳಿಗಳ ಅಭಿವೃದ್ಧಿ. ಹೆಚ್ಚು ಪೌಷ್ಠಿಕಾಂಶ ಮತ್ತು ಅಧಿಕ ಇಳುವರಿ ನೀಡುವ ಹೊಸ ತಳಿಗಳ ಸಂವರ್ಧನೆ. ನೂತನ ಕೃಷಿ ಬೇಸಾಯ ಕ್ರಮಗಳು ಮತ್ತು ತಂತ್ರಜ್ಞಾನಗಳ ವಿನಿಮಯ.

ಒಪ್ಪಂದದ ಸಂದರ್ಭದಲ್ಲಿ ಸಚಿವರು ಕರ್ನಾಟಕದಲ್ಲಿಯೂ ಅಂತರಾಷ್ಟ್ರೀಯ ಮಟ್ಟದ ಭತ್ತ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುವ ಕುರಿತು IRRI ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು. ಅಲ್ಲದೆ, ಉಭಯ ದೇಶಗಳ ಭತ್ತದ ಮಹತ್ವ, ಬೇಸಾಯ ಕ್ರಮಗಳು, ಮೌಲ್ಯವರ್ಧನೆಗೆ ಅನುಸರಿಸಬೇಕಾದ ಮಾರ್ಗಗಳ ಕುರಿತು ಮಾಹಿತಿ ಹಾಗೂ ಅನುಭವಗಳ ವಿನಿಮಯ ನಡೆಯಿತು.

ಕರ್ನಾಟಕ ಸರ್ಕಾರವು ಭತ್ತದ ತಳಿಗಳ ಸಂರಕ್ಷಣೆ ಮತ್ತು ಸಂಶೋಧನೆಗಾಗಿ ತೋರುತ್ತಿರುವ ಕಾಳಜಿ ಮತ್ತು ರೈತಪರ ಯೋಜನೆಗಳನ್ನು IRRI ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದರು. ಇದಕ್ಕೆ ಕಾರಣರಾದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ, 1945ರಿಂದಲೂ ಭಾರತ ಮತ್ತು ಫಿಲಿಪೈನ್ಸ್ ನಡುವೆ ಇರುವ ಬಾಂಧವ್ಯ ಮತ್ತು ಕೃಷಿ ಸಹಕಾರವನ್ನು ಸ್ಮರಿಸಲಾಯಿತು.

IRRI ನ ಉಪ ಮಹಾನಿರ್ದೇಶಕರಾದ ಜುನೆಲ್ ಸಯಾನೋ, ಡಾ. ಸಂಕಲ್ಪ್ ಭೋಸ್ಲೆ, ಮಂಡ್ಯ ಕೃಷಿ ವಿ.ವಿ ವಿಶೇಷಾಧಿಕಾರಿ ಡಾ. ಕೆ.ಎಂ. ಹರಿಣಿಕುಮಾರ್ ಸೇರಿದಂತೆ ಹಲವು ವಿಜ್ಞಾನಿಗಳು ಮತ್ತು ಅಧಿಕಾರಿಗಳು ಈ ಮಹತ್ವದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!