ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡುಗಳ್ಳ ವೀರಪ್ಪನ್ (Veerappan) ಸಹಚರ, 1993 ರ ಪಾಲಾರ್ ಬಾಂಬ್ ಸ್ಪೋಟದ (Palar Bomb Blast) ಪ್ರಮುಖ ಅಪರಾಧಿ ಜ್ಞಾನಪ್ರಕಾಶ್ (Gnana Prakash) ನಿಧನ ಹೊಂದಿದ್ದಾರೆ.
ಮೃತ ಜ್ಞಾನಪ್ರಕಾಶ್ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಮಾನವೀಯತೆ ಆಧಾರದ ಮೇಲೆ ಸುಪ್ರೀಂಕೋರ್ಟ್ನಿಂದ ಜಾಮೀನು ಮಂಜೂರು ಮಾಡಲಾಗಿತ್ತು.
2022ರ ಡಿಸೆಂಬರ್ 20 ರಂದು ಮೈಸೂರು ಜೈಲಿನಿಂದ ಬಿಡುಗಡೆ ಆಗಿದ್ದರು.
1993ರ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜೊತೆಗೆ ಜ್ಞಾನಪ್ರಕಾಶ್ ಭಾಗಿಯಾಗಿದ್ದರು ಎಂದು ಮೈಸೂರಿನ ಟಾಡಾ ನ್ಯಾಯಾಲಯ 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. 2014ರಲ್ಲಿ ಸುಪ್ರಿಂ ಕೋರ್ಟ್, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿ ತೀರ್ಪು ನೀಡಿತ್ತು.
ಬೆಳಗಾವಿಯ ಹಿಂಡಲಗಾ ಹಾಗೂ ಮೈಸೂರು ಕಾರಾಗೃಹದಲ್ಲಿ 29 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ ಜ್ಞಾನಪ್ರಕಾಶ್‌ಗೆ ಮೂರು ವರ್ಷಗಳ ಹಿಂದೆ ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಮಾನವೀಯತೆ ಆಧಾರದ ಮೇಲೆ ಸುಪ್ರೀಂ ಕೋರ್ಟ್ 2022ರ ನ.26ರಂದು ಜಾಮೀನು ಮಂಜೂರು ಮಾಡಿತ್ತು.
ಮೈಸೂರಿನ ಕಾರಾಗೃಹದಿಂದ 2022ರ ಡಿ.20ರಂದು ಬಿಡುಗಡೆಯಾಗಿದ್ದ ಅವರು ಸಂದನಪಾಳ್ಯದಲ್ಲಿ ವಾಸವಿದ್ದರು. ಅವರಿಗೆ ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.