ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಾಸಿಯ ಜ್ಞಾನವಾಪಿ (Gyanvapi Case) ಮಸೀದಿಯೊಳಗೆ ಪೂಜೆ ಸಲ್ಲಿಸುವ ಹಕ್ಕನ್ನು ಕೋರಿ ಹಿಂದು ಮಹಿಳಾ ಆರಾಧಕರು ಸಲ್ಲಿಸಿರುವ ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಮುಸ್ಲಿಂ ಸಮಿತಿಯು ಸಲ್ಲಿಸಿದ ಮನವಿಯನ್ನು ಅಲಹಾಬಾದ್ ಹೈಕೋರ್ಟ್ (Allahabad High Court) ಬುಧವಾರ ವಜಾಗೊಳಿಸಿದೆ.
ಅಂಜುಮನ್ ಇಂತೇಜಾಮಿಯಾ ಮಸೀದಿ (Anjuman Intezamia Masjid -AIM) ಸಮಿತಿ ಮತ್ತು ಉತ್ತರ ಪ್ರದೇಶ ಸುನ್ನಿ ವಕ್ಫ್ ಬೋರ್ಡ್ 1991 ರ ಪೂಜಾ ಸ್ಥಳಗಳ ಕಾಯಿದೆ ಮತ್ತು 1995 ರ ಕೇಂದ್ರ ವಕ್ಫ್ ಕಾಯಿದೆಯಡಿಯಲ್ಲಿ ಇದನ್ನು ನಿರ್ವಹಿಸಲಾಗುವುದಿಲ್ಲ ಎಂದು ವಾದಿಸಿ, ಪ್ರಕರಣವನ್ನು ವಜಾಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಾರಣಾಸಿಯ ಜಿಲ್ಲಾ ನ್ಯಾಯಾಧೀಶರ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿ ಇದಾಗಿದೆ.
ವಾರಣಾಸಿ ನ್ಯಾಯಾಲಯದಲ್ಲಿ ರಾಖಿ ಸಿಂಗ್ ಮತ್ತು ಐವರು ಮಹಿಳೆಯರು ಸೇರಿದಂತೆ ಒಂಬತ್ತು ಮಂದಿ ಇತರರು ಸಿವಿಲ್ ದಾವೆ ಹೂಡಿದ್ದರು. ಅವರು ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ್ ಗೌರಿಯ ನಿಯಮಿತ ಪೂಜೆಯನ್ನು ಬಯಸಿದ್ದರು.
ವಾದಗಳನ್ನು ಆಲಿಸಿದ ನಂತರ ಅಲಹಾಬಾದ್ ಹೈಕೋರ್ಟ್, ನವೆಂಬರ್ 28, 2022 ರಂದು ತನ್ನ ನಿರ್ಧಾರವನ್ನು ಕಾಯ್ದಿರಿಸಿತ್ತು. ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಪ್ರಕಾಶ್ ಪಾಡಿಯಾ ಅವರು ಕಕ್ಷಿದಾರರ ವಕೀಲರಿಂದ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ ಎಂದು ಸೂಚಿಸಿದ್ದಾರೆ. ನ್ಯಾಯಾಲಯವು ಇದೀಗ ಜುಲೈ 15 ಕ್ಕೆ ವಿಚಾರಣೆಯನ್ನು ಮುಂದೂಡಿದೆ.