ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಹಮ್ಮಿಕೊಂಡಿರುವ ‘ಗೋ ಬ್ಯಾಕ್ ಗವರ್ನರ್’ ಚಳುವಳಿಯನ್ನು “ಕೇವಲ ರಾಜಕೀಯ ನಾಟಕ” ಎಂದು ಕರೆದಿದ್ದಾರೆ.
ವಿಶೇಷ ಅಧಿವೇಶನದ ಕುರಿತು ಮಾತನಾಡಿದ ಅವರು, ಇತಿಹಾಸದಲ್ಲಿ ರಾಜ್ಯಪಾಲರ ಭಾಷಣ ಮೊಟಕುಗೊಂಡ ಪ್ರಸಂಗಗಳು ಹೊಸದೇನಲ್ಲ. ಜೆ.ಹೆಚ್. ಪಟೇಲರ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಅಂದಿನ ಘಟನೆಗಳನ್ನು ನೆನಪಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಮುಂದುವರಿದು, ಕಾಂಗ್ರೆಸ್ ಸರ್ಕಾರವು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿ ದಲಿತರಿಗೆ ದ್ರೋಹ ಮಾಡಿದೆ. ಈಗ ಅದೇ ದಲಿತರ ಹೆಸರನ್ನು ಬಳಸಿಕೊಂಡು ಕೇಂದ್ರದ ವಿರುದ್ಧ ನಿಂದನೆ ಮಾಡುವುದು ಮತ್ತು ವಿಶೇಷ ಅಧಿವೇಶನ ನಡೆಸಿ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು. “ಈ ಸಂಘರ್ಷದಿಂದ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.


