July 28, 2026
Tuesday, July 28, 2026
spot_img

ಮೇಕೆದಾಟು ವಿವಾದ: ಪ್ರಧಾನಿ ಮೋದಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಕೆದಾಟು ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಇತ್ತೀಚೆಗೆ ರಾಜ್ಯಸಭೆಯಲ್ಲಿ ನೀಡಿರುವ ಲಿಖಿತ ಉತ್ತರಕ್ಕೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಜಲಶಕ್ತಿ ಸಚಿವಾಲಯದ ಉತ್ತರವು ಅಂತರರಾಜ್ಯ ನದಿ ನೀರು ವಿವಾದದ ಸ್ಥಾಪಿತ ಕಾನೂನು ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದು, ಆ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ವಿವಾದಕ್ಕೆ ಕಾರಣವಾದ ಕೇಂದ್ರದ ಉತ್ತರ:

ರಾಜ್ಯಸಭೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಜಲಶಕ್ತಿ ಸಚಿವಾಲಯವು, “ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಕಾವೇರಿ ನದಿಯ ಕೆಳಹಂತದ ರಾಜ್ಯಗಳಾದ ತಮಿಳುನಾಡು, ಕೇರಳ ಅಥವಾ ಪುದುಚೇರಿಯಿಂದ ಒಪ್ಪಿಗೆ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ತನ್ನ 2018ರ ತೀರ್ಪಿನಲ್ಲಿ ಎಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ” ಎಂದು ತಿಳಿಸಿತ್ತು. ಕೇಂದ್ರದ ಈ ಹೇಳಿಕೆಯು ಕಾವೇರಿ ನೀರನ್ನು ನಂಬಿರುವ ಕೆಳಹಂತದ ರಾಜ್ಯಗಳ ಹಕ್ಕುಗಳನ್ನು ಕಡೆಗಣಿಸಿದೆ ಎಂದು ತಮಿಳುನಾಡು ಆಕ್ಷೇಪಿಸಿದೆ.

ಸುಪ್ರೀಂ ಕೋರ್ಟ್ ತೀರ್ಪು ನೆನಪಿಸಿದ ತಮಿಳುನಾಡು ಸಿಎಂ:

ತಮ್ಮ ಪತ್ರದಲ್ಲಿ ಸುಪ್ರೀಂ ಕೋರ್ಟ್‌ನ ಹಳೆಯ ಸಂವಿಧಾನ ಪೀಠದ ತೀರ್ಪುಗಳನ್ನು ಉಲ್ಲೇಖಿಸಿರುವ ತಮಿಳುನಾಡು ಮುಖ್ಯಮಂತ್ರಿಗಳು, “ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವಿನ ಆಲಮಟ್ಟಿ ಜಲಾಶಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟವಾದ ತೀರ್ಪು ನೀಡಿದೆ. ಅದರನ್ವಯ, ನದಿಯ ಮೇಲ್ಭಾಗದ ರಾಜ್ಯವು ಯಾವುದೇ ಹೊಸ ಯೋಜನೆ ಜಾರಿಗೆ ತರುವ ಮುನ್ನ ಕೆಳಹಂತದ ರಾಜ್ಯದ ಪೂರ್ವಾನುಮತಿ ಮತ್ತು ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ” ಎಂದು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ;

ಕಾವೇರಿ ನದಿಯು ದಕ್ಷಿಣ ಭಾರತದ ಲಕ್ಷಾಂತರ ರೈತರು ಹಾಗೂ ನಾಗರಿಕರ ಜೀವನಾಡಿಯಾಗಿದೆ. ಕಾವೇರಿ ನದಿ ನೀರು ವಿವಾದ ನ್ಯಾಯಾಧೀಕರಣದ ಅಂತಿಮ ಆದೇಶ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಸಂಪೂರ್ಣವಾಗಿ ಪಾಲಿಸದೆ ಮೇಕೆದಾಟು ಯೋಜನೆಗೆ ಯಾವುದೇ ರೀತಿಯ ಶಾಸನಬದ್ಧ ಅಥವಾ ಆಡಳಿತಾತ್ಮಕ ಅನುಮೋದನೆಗಳನ್ನು ನೀಡಬಾರದು ಎಂದು ಸಿಎಂ ವಿಜಯ್ ಪ್ರಧಾನಿಗಳಿಗೆ ಆಗ್ರಹಿಸಿದ್ದಾರೆ.

 ಅಂತರರಾಜ್ಯ ಒಕ್ಕೂಟ ವ್ಯವಸ್ಥೆಯ ಸಾಮರಸ್ಯ ಮತ್ತು ನ್ಯಾಯದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಪತ್ರದಲ್ಲಿ ವಿನಂತಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !