September 29, 2026
Tuesday, September 29, 2026
spot_img

ಮೇಕೆದಾಟು ವೀಕ್ಷಣೆ: ತಮಿಳುನಾಡು ನಿಯೋಗಕ್ಕೆ ದೆಹಲಿಯಲ್ಲಿ ಆಹ್ವಾನ ನೀಡಿದ‌ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇಕೆದಾಟು ಯೋಜನೆಯ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆಯೇ ವಿನಃ ನೀರಾವರಿಗಲ್ಲ ಎಂಬ ಸತ್ಯವನ್ನು ಕೇಂದ್ರ ಸಚಿವರು ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ, ತಮಿಳುನಾಡು ಸರ್ಕಾರವೂ ತನ್ನದೊಂದು ನಿಯೋಗವನ್ನು ಕಳುಹಿಸಿ ಯೋಜನಾ ಸ್ಥಳವನ್ನು ಮುಕ್ತವಾಗಿ ಪರಿಶೀಲಿಸಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ತಮಿಳುನಾಡು ನಿಯೋಗ ಬಂದರೆ ಪೂರ್ಣ ಸಹಕಾರ

ಕೇಂದ್ರ ಸಚಿವರೊಂದಿಗಿನ ಸುದೀರ್ಘ ಸಭೆಯ ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇಕೆದಾಟು ಜಲಾಶಯದ ಸವಿವರ ಯೋಜನಾ ವರದಿ ಮರುಸಲ್ಲಿಸುವಿಕೆ ಹಾಗೂ ಪರಿಸರ ಹಾನಿ ಸರಿದೂಗಿಸಲು ಪರ್ಯಾಯ ಭೂಮಿ ಗುರುತಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾವೇರಿ ನೀರನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಕೇಂದ್ರದ ಅಧಿಕಾರಿಗಳೂ ಮನಗಂಡಿದ್ದಾರೆ. ತಮಿಳುನಾಡು ನಿಯೋಗ ಭೇಟಿ ನೀಡಿದರೆ ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗುವುದು ಎಂದರು.

ಮುಂದುವರೆದು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿಯಾಗಿ ಕೃಷ್ಣಾ, ಮಹಾದಾಯಿ ಮತ್ತು ಮೇಕೆದಾಟು ವಿವಾದಗಳ ಕುರಿತು ಚರ್ಚಿಸಲಾಗಿದೆ. ಮಹಾದಾಯಿ ಅರಣ್ಯ ಸಮಸ್ಯೆ ಪರಿಹಾರಕ್ಕೆ ಜಂಟಿ ಸಭೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ನೆರೆರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲು ಕೇಂದ್ರ ಸಚಿವರು ಒಪ್ಪಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ 2023ರ ಬಜೆಟ್‌ನಲ್ಲಿ ಘೋಷಿಸಿದ್ದ ಬರೋಬ್ಬರಿ 5,300 ಕೋಟಿ ರೂ. ಹಣವನ್ನು ತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ ಎಂದು ತಿಳಿಸಿದರು

ರಾಜ್ಯದಲ್ಲಿ ಭೀಕರ ಬರ: ಅ. 3ಕ್ಕೆ ಕೇಂದ್ರ ತಂಡ ಆಗಮನ

ರಾಜ್ಯದ 200ಕ್ಕೂ ಹೆಚ್ಚು ತಾಲ್ಲೂಕುಗಳು ತೀವ್ರ ಬರಗಾಲಕ್ಕೆ ತುತ್ತಾಗಿವೆ. ಮೊದಲ ಹಂತದಲ್ಲಿ 101 ತಾಲ್ಲೂಕುಗಳಿಗೆ 700 ಕೋಟಿ ರೂ. ನೆರವು ಕೋರಲಾಗಿತ್ತು, ಈಗ ಸಂಕಷ್ಟ ಹೆಚ್ಚಿರುವುದರಿಂದ ಪರಿಹಾರದ ಮೊತ್ತವೂ ಹೆಚ್ಚಾಗಲಿದೆ. ಪರಿಸ್ಥಿತಿ ವೀಕ್ಷಿಸಲು ಅ. 3 ರಂದು ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಬರಲಿದೆ ಎಂದು ಡಿಕೆಶಿ ಮಾಹಿತಿ ನೀಡಿದರು. ಕಸ್ತೂರಿರಂಗನ್ ವರದಿ ಮತ್ತು ಈ ಎಲ್ಲ ಜಲವಿವಾದಗಳಿಗಾಗಿ ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ನಿರ್ಧರಿಸಲಾಗಿದೆ.

ಇದನ್ನೂ ಓದಿ:

ಬೆಂಗಳೂರು ಅಭಿವೃದ್ಧಿಗೆ ‘ರಕ್ಷಣಾ ಇಲಾಖೆ’ ಭೂಮಿ

ಬೆಂಗಳೂರಿನ ಇಬ್ಲೂರ್‌ನಲ್ಲಿರುವ ರಕ್ಷಣಾ ಇಲಾಖೆಗೆ ಸೇರಿದ ಖಾಲಿ 700 ಎಕರೆ ಜಾಗದಲ್ಲಿ ಸುಂದರ ಗ್ರೀನ್ ಪಾರ್ಕ್ ಅಭಿವೃದ್ಧಿಪಡಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.  ಮೇಕ್ರಿ ಸರ್ಕಲ್, ಸರ್ಜಾಪುರ ರಸ್ತೆ ಅಗಲೀಕರಣ ಹಾಗೂ ಆಗರ-ಸರ್ಜಾಪುರ ಲಿಂಕ್ ರಸ್ತೆ ನಿರ್ಮಾಣಕ್ಕೆ ರಕ್ಷಣಾ ಭೂಮಿ ಹಸ್ತಾಂತರಕ್ಕೆ ಕೋರಲಾಗಿದೆ. ಜೊತೆಗೆ ಬೆಂಗಳೂರಿನ ಮಹತ್ವಾಕಾಂಕ್ಷೆಯ ಸ್ಕೈಡೆಕ್ ಯೋಜನೆಯ ನಿರ್ಮಾಣಕ್ಕೆ ವಿಮಾನ ನಿಲ್ದಾಣದಿಂದ 26 ಕಿ.ಮೀ ದೂರದಲ್ಲಿ ಸೂಕ್ತ ಜಾಗ ಗುರುತಿಸಲು ಕೇಂದ್ರ ಸೂಚಿಸಿದ್ದು, ಪ್ರವಾಸೋದ್ಯಮದ ದೃಷ್ಟಿಯಿಂದ ಪರಿಗಣಿಸಲು ಮನವಿ ಮಾಡಲಾಗಿದೆ.

Must Read