ದೇವರೇ ನನ್ನನ್ನು ರಕ್ಷಿಸಿದ್ದಾನೆ, ಶೀಘ್ರವೇ ಬಂದೇಬರುತ್ತೆ ನ್ಯಾಯ ಸಿಗುವ ದಿನ: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ತಮ್ಮ ಬೆಂಬಲಿಗರಿಗೆ ತಾವು ದೇಶಕ್ಕೆ ಮರಳಿ ಬರುವುದಾಗಿ ಸ್ಪಷ್ಟ ಸಂದೇಶ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮ ಸಂವಾದದಲ್ಲಿ ತಮ್ಮ ಪಕ್ಷದ ನಾಯಕರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಿದ ಶೇಖ್ ಹಸೀನಾ, ದೇವರು ನನ್ನನ್ನು ಒಂದು ಕಾರಣಕ್ಕಾಗಿ ಜೀವಂತವಾಗಿಟ್ಟಿದ್ದಾನೆ ಮತ್ತು ನ್ಯಾಯ ಸಿಗುವ ದಿನ ಬಂದೇಬರುತ್ತದೆ ಎಂದು ಹೇಳಿದ್ದಾರೆ.

ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ವಿರುದ್ಧ ಗುಡುಗಿದ ಹಸೀನಾ, ಯೂನಸ್ ಜನರನ್ನು ಎಂದಿಗೂ ಪ್ರೀತಿಸದ ವ್ಯಕ್ತಿ. ಯೂನಸ್ ಹೆಚ್ಚಿನ ಬಡ್ಡಿದರಗಳಿಗೆ ಸಣ್ಣ ಮೊತ್ತವನ್ನು ಸಾಲವಾಗಿ ನೀಡಿದರು ಮತ್ತು ಆ ಹಣವನ್ನು ವಿದೇಶದಲ್ಲಿ ಐಷಾರಾಮಿಯಾಗಿ ಬದುಕಲು ಬಳಸಿಕೊಂಡರು. ಆಗ ನಮಗೆ ಅವರ ಯೋಜನೆ ಅರ್ಥವಾಗಿರಲಿಲ್ಲ. ಹೀಗಾಗಿ ಅವರಿಗೆ ನಾವು ತುಂಬಾ ಸಹಾಯ ಮಾಡಿದ್ದೇವೆ. ಆದರೆ ಅದನ್ನು ಅವರು ಜನರ ಪ್ರಯೋಜನಕ್ಕೆ ಬಳಸಲಿಲ್ಲ. ತಮಗೆ ಒಳ್ಳೆಯದನ್ನು ಮಾಡಿಕೊಂಡರು. ಅನಂತರ ಅಧಿಕಾರಕ್ಕಾಗಿ ಆಸೆ ಪಟ್ಟು ಮರಳಿ ಬಂದರು. ಅದು ಈಗ ಬಾಂಗ್ಲಾದೇಶವನ್ನು ಸುಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಾಂಗ್ಲಾದಲ್ಲಿ ನಮ್ಮ ನಾಯಕರು ಮತ್ತು ಕಾರ್ಯಕರ್ತರನ್ನು ಹಿಂಸಾತ್ಮಕವಾಗಿ ಕೊಲ್ಲಲಾಗುತ್ತಿದೆ. ಅವಾಮಿ ಲೀಗ್, ಪೊಲೀಸರು, ವಕೀಲರು, ಪತ್ರಕರ್ತರು, ಕಲಾವಿದರು ಹೀಗೆ ಎಲ್ಲರನ್ನೂ ಗುರಿ ಮಾಡಲಾಗಿದೆ ಎಂದರು.

ನಾನು ನನ್ನ ತಂದೆ, ತಾಯಿ, ಸಹೋದರ ಎಲ್ಲರನ್ನೂ ಒಂದೇ ದಿನದಲ್ಲಿ ಕಳೆದುಕೊಂಡೆ. ಬಳಿಕ ಅವರು ನಮ್ಮನ್ನು ದೇಶಕ್ಕೆ ಮರಳಿ ಬರಲು ಬಿಡಲಿಲ್ಲ. ನಮ್ಮವರನ್ನು ಕಳೆದುಕೊಳ್ಳುವ ನೋವು ಏನೆಂದು ನನಗೆ ತಿಳಿದಿದೆ. ಅಲ್ಲಾಹ್ ನನ್ನನ್ನು ರಕ್ಷಿಸಿದ್ದಾನೆ. ಬಹುಶಃ ಅವನು ನನ್ನ ಮೂಲಕ ಏನಾದರೂ ಒಳ್ಳೆಯದನ್ನು ಮಾಡಲು ಬಯಸುತ್ತಾನೆ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಇದುವೇ ನನ್ನ ಗುರಿ ಎಂದು ಹಸೀನಾ ತಿಳಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!