ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಮಾದನಾಯಕನಹಳ್ಳಿ ಬಳಿ ಮಾಚೋಹಳ್ಳಿ ಗೇಟ್ ಪ್ರದೇಶದಲ್ಲಿರುವ ಚಿನ್ನದಂಗಡಿಯಲ್ಲಿ ಟಾಯ್ ಗನ್ ಬಳಸಿ ದರೋಡೆ ನಡೆದಿದೆ. ಕಳೆದ ಗುರುವಾರ ಸಂಜೆ ಅಂಗಡಿ ಮುಚ್ಚಲು ಸಿದ್ಧತೆ ನಡೆಯುತ್ತಿದ್ದ ಸಂದರ್ಭ, ಮೂವರು ಅಪರಿಚಿತರು ಕೈಯಲ್ಲಿ ಗನ್ ಹಿಡಿದು ಅಂಗಡಿಯೊಳಗೆ ನುಗ್ಗಿದ್ದು, ಸುಮಾರು 180 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿದ್ದಾರೆ.
ಘಟನೆಯ ಸಮಯದಲ್ಲಿ ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿ ಆರೋಪಿಗಳನ್ನು ತಡೆಯಲು ಯತ್ನಿಸಿದರೂ ಯಶಸ್ವಿಯಾಗಿಲ್ಲ. ಆರೋಪಿಗಳು ದರೋಡೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಆರೋಪಿಗಳು ಬಳಸಿದ ಗನ್‌ಗಳು ನಿಜವಾದವುಗಳಲ್ಲ, ಟಾಯ್ ಗನ್ ಎಂಬುದು ಸ್ಪಷ್ಟವಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಈ ದರೋಡೆ ಪ್ರಕರಣದ ಹಿಂದೆ ಅಂಗಡಿ ಮಾಲೀಕರಿಗೆ ಪರಿಚಿತರೇ ಇದ್ದಿರಬಹುದೆಂಬ ಶಂಕೆ ಹುಟ್ಟಿದೆ. ಆರೋಪಿಗಳ ಗುರುತು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಕೆಲವು ಪ್ರಮುಖ ಸುಳಿವುಗಳು ಲಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.