ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಬಂಧನ ಕರ್ನಾಟಕದಲ್ಲಿ ಸಾಕಷ್ಟು ಸುದ್ದಿ ಮಾಡಿದೆ. ಈಕೆಯ ತಂದೆ ಕರ್ನಾಟಕದ ಡಿಜಿಪಿ ಆಗಿರುವ ಕಾರಣಕ್ಕೆ ಈ ವಿಚಾರ ಮತ್ತಷ್ಟು ಕುತೂಹಲ ಕೆರಳಿಸಿದೆ.
14 ಕೆಜಿ ಚಿನ್ನದ ಬಾರ್‌ಗಳನ್ನು ಬೆಲ್ಟ್‌ನಲ್ಲಿ ಸಿಕ್ಕಿಸಿಕೊಂಡು ಬಂದು ಬಂಧನಕ್ಕೆ ಒಳಗಾಗಿರುವ ರನ್ಯಾ ರಾವ್, ಕರ್ನಾಟಕದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರ ಪುತ್ರಿ. ರನ್ಯಾ ರಾವ್ ಬಂಧನದ ಬೆನ್ನಲ್ಲಿಯೇ ಕೆ.ರಾಮಚಂದ್ರ ರಾವ್ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ.
ಡೈರಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್‌ನ ಅಧಿಕಾರಿಗಳು ಸೋಮವಾರ ರನ್ಯಾ ರಾವ್ ದುಬೈನಿಂದ ಬೆಂಗಳೂರಿಗೆ ವಾಪಸಾಗುವಾಗ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾದ ರನ್ಯಾ ರಾವ್ ಅವರನ್ನು ಮಂಗಳವಾರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣ ಸಾರ್ವಜನಿಕರ ನಡುವೆ ಚರ್ಚೆಗೆ ಕಾರಣವಾದ ಬೆನ್ನಲ್ಲಿಯೇ, ಡಿಜಿಪಿ ರಾಮಚಂದ್ರ ರಾವ್ ತಮ್ಮ ಮಗಳ ಚುಟುವಟಿಕೆಯಲ್ಲಿ ತಮ್ಮದು ಯಾವುದೇ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ರನ್ಯಾ ರಾವ್ ಮದುವೆಯಾಗಿತ್ತು. ಅಂದಿನಿಂದ ಈಕೆ ಮನೆಗೆ ಭೇಟಿ ನೀಡಿಲ್ಲ. ಆಕೆ ಹಾಗೂ ಆಕೆಯ ಗಂಡನ ವ್ಯವಹಾರಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಇದು ನನಗೆ ಬಹಳ ಶಾಕ್ ನೀಡಿದ್ದು ಅದರೊಂದಿಗೆ ಬೇಸರವೂ ಆಗಿದೆ. ಈಕೆಯ ವಿರುದ್ಧ ಕಾನೂನು ರೀತಿ ಕ್ರಮವಾಗಲಿದೆ ಎಂದು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.