ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರನ್ಯಾ ರಾವ್ ಭಾಗಿಯಾಗಿರುವ ಅಂತಾರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಪ್ರಕರಣ ಹೊಸ ತಿರುವು ಪಡೆದಿದೆ. ಹಣದ ಅಕ್ರಮ ವರ್ಗಾವಣೆ ಮತ್ತು ಚಿನ್ನದ ಸಾಗಣೆ ಸಂಬಂಧಿತ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ನಟಿಯ 34.12 ಕೋಟಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿರುವುದಾಗಿ ಘೋಷಿಸಿದೆ.
ಈ ಕ್ರಮದೊಂದಿಗೆ, ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ತೀವ್ರ ತನಿಖೆ ಮುಂದುವರೆಸಿದ್ದು, ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ರನ್ಯಾ ರಾವ್‌ಗೆ ಸಂಬಂಧಪಟ್ಟ ಅನೇಕ ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಿದೆ. ಇಡೀ ಪ್ರಕರಣವು ನಟಿ ರನ್ಯಾ ರಾವ್ ಮತ್ತು ಅವರ ಸಹಚರ ತರುಣ್ ಕೊಂಡೂರು ರಾಜು ಹಾಗೂ ಇತರರೊಂದಿಗೆ ಸೇರಿಕೊಂಡು ಚಿನ್ನವನ್ನು ದುಬೈ ಮತ್ತು ಉಗಾಂಡಾದ ಪೂರೈಕೆದಾರರಿಂದ ಖರೀದಿಸಿ, ಹವಾಲಾ ಮಾರ್ಗದಿಂದ ಪಾವತಿ ಮಾಡಿರುವುದನ್ನು ಬಹಿರಂಗಪಡಿಸಿದೆ.
ತನ್ನ ತನಿಖೆಯ ಪ್ರಕಾರ, ಈ ಕಳ್ಳಸಾಗಣೆಗೆ ರನ್ಯಾ ಸುಳ್ಳು ಕಸ್ಟಮ್ಸ್ ಡಿಕ್ಲರೇಷನ್ ಪಡೆದು, ಚಿನ್ನವನ್ನು ಭಾರತಕ್ಕೆ ತರುವುದಾಗಿ ನಕಲಿ ದಾಖಲೆಗಳನ್ನು ತಯಾರಿಸಿ, ಬಲಿಷ್ಠ ಅಂತಾರಾಷ್ಟ್ರೀಯ ಜಾಲವನ್ನು ರಚಿಸಿದ್ದರು. ಈ ಚಿನ್ನವನ್ನು ಭಾರತೀಯ ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಪುನಃ ಹವಾಲಾ ಮೂಲಕ ವಿದೇಶಗಳಿಗೆ ವರ್ಗಾಯಿಸಿ, ಚಿನ್ನದ ಸಾಗಣೆಯನ್ನು ಮುಂದುವರೆಸಿದ್ದರು.
ಮಾರ್ಚ್ 3ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಆರ್‌ಐ (DRI) ನಡೆಸಿದ ಕಾರ್ಯಾಚರಣೆಯಲ್ಲಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿತ್ತು. ಈ ವೇಳೆ 12.56 ಕೋಟಿ ಮೌಲ್ಯದ 14.213 ಕೆಜಿ 24 ಕ್ಯಾರೆಟ್ ವಿದೇಶಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಅವರ ನಿವಾಸದಲ್ಲಿ ನಡೆದ ಸರ್ಚ್‌ಗಳಲ್ಲಿ 2.67 ಕೋಟಿ ನಗದು ಮತ್ತು 2.06 ಕೋಟಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿತ್ತು.
ಸಾಕ್ಷ್ಯಗಳು ಸ್ಪಷ್ಟವಾಗಿ ತೋರಿಸುತ್ತಿರುವಂತೆ, ನಟಿ ರನ್ಯಾ ರಾವ್ ವಿರುದ್ಧದ ಕಾನೂನು ಕಾರ್ಯಾಚರಣೆ ಇನ್ನಷ್ಟು ಗಂಭೀರತೆ ಪಡೆದುಕೊಳ್ಳುವ ಸಾಧ್ಯತೆ ಇದೆ.