ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲದಲ್ಲಿ ಖಂಡಿತಾ ಈ ಒಂದು ತಿಂಡಿಯನ್ನು ಮಿಸ್ ಮಾಡ್ಲೇಬೇಡಿ. ಆರೋಗ್ಯದ ದೃಷ್ಟಿಯಿಂದಲೂ ಇದು ಉಪಯುಕ್ತ. ರುಚಿಯೂ ಹೌದು. ಹಾಗಾದ್ರೆ ಯಾವ್ ತಿಂಡಿ ಅಂತಾನಾ? ಹೇಳ್ತೀನಿ .
ಮಲೆನಾಡು, ತುಳುನಾಡು ಪ್ರದೇಶದಲ್ಲಿ ಭಾರೀ ಫೇಮಸ್ ಆಗಿರೋ ತಿಂಡಿ ಇದು. ʻಪತ್ರೊಡೆʼ ಹೆಸರು ಕೇಳಿದ್ರೇ ಸಾಕು ಬಾಯಲ್ಲಿ ನೀರೂರುತ್ತೆ. ಒಂದೆರಡು ಮಳೆ ಬಂದಾಗ ಗ್ರಾಮೀಣ ಭಾಗಗಳಲ್ಲಿ, ತೋಟದೊಳಗೆ, ಕೆಲವೊಂದು ಕಾಡುಗಳಲ್ಲಿ, ಮರಗಳ ಮೇಲೂ ಈ ಹೃದಯಾಕಾರದ ಸುಂದರ ಗಿಡ ಹುಟ್ಟಿಕೊಳ್ಳುತ್ತವೆ. ಹೃದಯಾಕಾರದ ಹಸುರುವರ್ಣದ ಎಲೆಯನ್ನು ʻಕೆಸುವಿನ ಎಲೆʼ ಎಂದು ಕರೆಯಲಾಗುತ್ತದೆ.
ತುರಿಸುವ ಗುಣವನ್ನು ಹೊಂದಿರುವ ಈ ಎಲೆಗಳನ್ನು ಕತ್ತರಿಸುವಾಗ ಕೊಂಚ ಜಾಗೃತರಾಗಬೇಕು. ಎಲೆಗಳನ್ನು ಕೊಯ್ದು ತಂದು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ಎರಡು ಲೋಟ ಬೆಳ್ತಿಗೆ ಅಕ್ಕಿ, ಒಂದು ಲೋಟ ಕುಚ್ಚಿಗೆ ಅಕ್ಕಿಯನ್ನು ಚೆನ್ನಾಗಿ ನೀರಿನಲ್ಲಿ ನೆನೆಸಿಡಿ. ಅರ್ಧ ಕಪ್ ಕಡ್ಲೆಬೇಳೆಯನ್ನು ನೆನೆಯಲು ಹಾಕಿ. ಅರ್ಧ ಟೀ ಸ್ಪೂನ್ ಜೀರಿಗೆ, ಒಂದು ಟೀ ಸ್ಪೂನ್ ಕೊತ್ತಂಬರಿ, ಒಂದು ತುಂಡು ಬೆಲ್ಲ, ಐದು ಒಣಮೆಣಸಿನ ಕಾಯಿಯನ್ನು ತೆಂಗಿನೆಣ್ಣೆ ಹಾಕಿ ಹುದಿಟ್ಟುಕೊಳ್ಳಿ. ಎರಡು ಕಪ್ ತೆಂಗಿನ ತುರಿಯೊಂದಿಗೆ ಈ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿ. ಸ್ವಲ್ಪ ರುಬ್ಬಿದ ಮೇಲೆ ಅಕ್ಕಿ ಹಾಗೂ ಕಡ್ಲೆಬೇಳೆಯನ್ನು ಹಾಕಿ ನೀರು ಸೇರಿಸಿಕೊಳ್ಳದೆ ಹದಾನಯವಾಗುವಂತೆ ರುಬ್ಬಿಕೊಳ್ಳಿ. ಇದೀಗ ತೊಳೆದಿಟ್ಟ ಎಲೆಯ ಮೇಲ್ಭಾಗಕ್ಕೆ ತೆಳುವಾಗಿ ರುಬ್ಬಿದ ಹಿಟ್ಟನ್ನು ಹೆಚ್ಚಿ ರೋಲ್ ಮಾಡಿ ಹಬೆಯಲ್ಲಿ ಬೇಯಿಸಿ. ಬೆಂದ ನಂತರ ಸಣ್ಣದಾಗಿ ಕತ್ತರಿಸಿ ಕಾವಲಿಯಲ್ಲಿ ಎಣ್ಣೆ ಫ್ರೈ ಮಾಡಿ. ಸಂಜೆಯ ಸ್ನಾಕ್ಸ್‌ಗೆ ಇದು ಬಲುರುಚಿ.
ಇದೇ ರೋಲುಗಳನ್ನು ಸಣ್ಣದಾಗಿ ಹೆಚ್ಚಿ ಬಾಣಲೆಯಲ್ಲಿ ಈರುಳ್ಳಿ ಒಗ್ಗರಣೆ ಹಾಕಿಯೂ ಉಪ್ಕರಿ ರೀತಿ ಸವಿಯಬಹುದು.