ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಕು ಪ್ರಾಣಿಗಳೊಂದಿಗೆ ಪ್ರಯಾಣಿಸುವವರಿಗೆ ಬಹುಕಾಲದ ಕನಸು ನನಸಾಗುವಂತಾಗಿದೆ. ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಕ್ರಮೇಣ ಬದಲಾವಣೆ ಮಾಡುತ್ತಿರುವ ಏರ್ ಇಂಡಿಯಾ, ಇದೀಗ ಪೆಟ್ ಲವರ್ಸ್‌ಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.
ವಿಮಾನ ಪ್ರಯಾಣದ ವೇಳೆ ಸಾಕು ಪ್ರಾಣಿಗಳನ್ನು ಕಾರ್ಗೋ ವಿಭಾಗಕ್ಕೆ ಒಪ್ಪಿಸಬೇಕಾದ ಅನಿವಾರ್ಯತೆಗೆ ವಿರಾಮ ನೀಡುತ್ತಾ, ಮಾಲೀಕರ ಜೊತೆಯಲ್ಲೇ ಕ್ಯಾಬಿನ್‌ನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಹೊಸ ನಿಯಮದಂತೆ, 10 ಕೆಜಿ ಒಳಗಿನ ನಾಯಿ ಮತ್ತು ಬೆಕ್ಕುಗಳನ್ನು ಮಾಲೀಕರೊಂದಿಗೆ ಎಕಾನಮಿ ಕ್ಯಾಬಿನ್‌ನಲ್ಲಿ ಕರೆದೊಯ್ಯಬಹುದು. ಈ ಹಿಂದೆ 72 ಗಂಟೆ ಮೊದಲು ಪೆಟ್ ಟಿಕೆಟ್ ಬುಕ್ ಮಾಡಬೇಕಿದ್ದ ನಿಯಮವನ್ನು ಸಡಿಲಗೊಳಿಸಿ, ಇದೀಗ ಪ್ರಯಾಣಕ್ಕೂ 48 ಗಂಟೆ ಮೊದಲು ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಅಚಾನಕ್ ಪ್ರಯಾಣ ಯೋಜನೆ ಮಾಡಿಕೊಳ್ಳುವವರಿಗೆ ಸಹಾಯವಾಗಲಿದೆ.
ಒಂದು ವಿಮಾನದಲ್ಲಿ ಗರಿಷ್ಠ ಎರಡು ಸಾಕು ಪ್ರಾಣಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ವಿಮಾನದ ಕೊನೆಯ ಭಾಗದಲ್ಲಿರುವ ಎರಡು ಸೀಟು ಸಾಲುಗಳನ್ನು ಪೆಟ್ ಪ್ರಯಾಣಕ್ಕೆ ವಿನ್ಯಾಸಗೊಳಿಸಲಾಗಿದೆ. ಸಾಕು ಪ್ರಾಣಿಗಳನ್ನು ಕಡ್ಡಾಯವಾಗಿ ಸಾಫ್ಟ್, ಸೋರಿಕೆಯಾಗದ ಕ್ಯಾರಿಯರ್‌ನಲ್ಲಿ ಕೊಂಡೊಯ್ಯಬೇಕು ಎಂಬ ನಿಯಮವಿದೆ. ಕ್ಯಾರಿಯರ್ ಗಾತ್ರ ನಿಗದಿತ ಮಿತಿಯೊಳಗೆ ಇರಬೇಕು.
ಇನ್ನು 10 ರಿಂದ 32 ಕೆಜಿ ತೂಕದ ಸಾಕು ಪ್ರಾಣಿಗಳಿಗೆ ಬ್ಯಾಗೇಜ್ ವಿಭಾಗದಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು, 32 ಕೆಜಿ ಮೇಲ್ಪಟ್ಟ ಪ್ರಾಣಿಗಳಿಗೆ ಕಾರ್ಗೋ ಸೇವೆ ಕಡ್ಡಾಯವಾಗಿದೆ. ದೇಶೀಯ ವಿಮಾನದಲ್ಲಿ ಕ್ಯಾಬಿನ್ ಪೆಟ್ ಪ್ರಯಾಣಕ್ಕೆ 7,500 ರೂಪಾಯಿ ಶುಲ್ಕ ನಿಗದಿಯಾಗಿದ್ದು, ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಡಾಲರ್ ಆಧಾರಿತ ಶುಲ್ಕ ವಿಧಿಸಲಾಗುತ್ತದೆ. ಈ ಹೊಸ ವ್ಯವಸ್ಥೆ ಸಾಕು ಪ್ರಾಣಿ ಮಾಲೀಕರಲ್ಲಿ ಸಂತಸ ಮೂಡಿಸಿದೆ.

