ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾನ್ಸರ್ ಪೀಡಿತ ರೋಗಿಗಳ ಚಿಕಿತ್ಸೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಆರಂಭವಾಗಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದ್ದಾರೆ.
ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇನ್ಮುಂದೆ ಜಿಲ್ಲಾ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಬಹುದು. ಪ್ರತಿ ವರ್ಷ ಹೊಸದಾಗಿ 70 ಸಾವಿರ ಕ್ಯಾನ್ಸರ್ ಪ್ರಕರಣ ದಾಖಲಾಗುತ್ತಿದೆ. ಬಡವರು ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯಬೇಕು ಅಂದರೆ ಬೆಂಗಳೂರಿನ ಕಿದ್ವಾಯಿ ಅಂತಹ ಸಂಸ್ಥೆಗಳಿಗೆ ಬರಬೇಕು. ಹಾಗಾಗಿ ಬಡವರಿಗೆ ಅನುಕೂಲ ಆಗಲಿ ಎಂದು 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಓಪನ್ ಮಾಡುತ್ತೇವೆ ಎಂದರು.
ನಾಳೆ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಪ್ರಾರಂಭಿಸುತ್ತಿದ್ದೇವೆ. ನಾಳೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಕ್ಯಾನ್ಸರ್ ಪತ್ತೆಯಾಗಿದೆ ಅನ್ನುವವರು ಕೀಮೋ ಥೆರಪಿ ಪಡೆಯಬಹುದು. ಎಲ್ಲಾ ರೀತಿಯ ಟ್ರೈನಿಂಗ್ಗಳನ್ನು ಮಾಡಲಾಗಿದೆ. ಮೆಡಿಕಲ್ ಅಂಕಾಲಜಿಸ್ಟ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನರ್ಸ್ಗಳಿಗೆ ತರಬೇತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಪ್ರತಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ 10 ಬೆಡ್ ಮೀಸಲು ಇಡುತ್ತೇವೆ. ಅದಕ್ಕೆ ಇಬ್ಬರು ನರ್ಸ್ ಗಳು ಇರುತ್ತಾರೆ. ಅಲ್ಲದೇ ಆಪ್ತ ಸಮಾಲೋಚನೆ, ಮೆಡಿಕಲ್ ಅಂಕಾಲಜಿಸ್ಟ್, ವೈದ್ಯರು ಹಾಗೂ ಫಾರ್ಮಾಸಿ ಅಧಿಕಾರಿಗಳು ಇರುತ್ತಾರೆ. ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಕಿಮೋಥೆರಪಿ ಸಿಗಲಿದೆ ಎಂದು ಮಾಹಿತಿ ನೀಡಿದರು.