ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯ ಸಂಘರ್ಷದ ನಡುವೆಯೂ ಭಾರತ ತನ್ನ ಇಂಧನ ಪೂರೈಕೆಯತ್ತ ಗಮನಹರಿಸಿದ್ದು, ಇದೀಗ ಮತ್ತೊಂದು ಹಡಗು ಎಲ್ಪಿಜಿ ಹೊತ್ತು ಹಾರ್ಮುಜ್ ಜಲಸಂಧಿ ದಾಟಿ ಭಾರತದತ್ತ ಸಂಚರಿಸಿದೆ.
ಒಂದೆಡೆ ಇರಾನ್ ಅಮೆರಿಕ ನಡುವೆ ದಿನೇ ದಿನೇ ಯುದ್ಧ ಹೆಚ್ಚುತ್ತಲ್ಲೇ ಇದ್ದು, ಈ ಆತಂಕದ ನಡುವೆ ಭಾರತವು ತನ್ನ ಜನತೆಗೆ ಇಂಧನ ಪೂರೈಸುವಲ್ಲಿ ಹೆಚ್ಚಿನ ಆದ್ಯತೆ ನೀಡಿದೆ. ಹೀಗಾಗಿ ಎಲ್ಪಿಜಿ ಟ್ಯಾಂಕರ್ ಹೊತ್ತು ಗ್ರೀನ್ ಸಾನ್ವಿ ಹಡಗು ಹಾರ್ಮುಜ್ ಜಲಸಂಧಿ ದಾಟಿದೆ ಎಂದು ವೆಸೆಲ್ಫೈಂಡರ್ ವರದಿ ಮಾಡಿದೆ. ಈ ಮೂಲಕ ಭಾರತಕ್ಕೆ ಆಗಮಿಸುತ್ತಿರುವ ಎಲ್ಪಿಜಿ ಹೊತ್ತ 7ನೇ ಹಡಗು ಇದಾಗಿದೆ.
ಯುದ್ಧ ಆರಂಭವಾದ ದಿನದಿಂದ ಇಲ್ಲಿವರೆಗೆ ಭಾರತಕ್ಕೆ ಇಎಲ್ಪಿಜಿ ಹೊತ್ತ 6 ಹಡಗುಗಳ ಸುರಕ್ಷಿತವಾಗಿ ತಲುಪಿವೆ. ಇದೀಗ ಗ್ರೀನ್ ಸಾನ್ವಿ 58,811 ಮೆಟ್ರಿಕ್ ಟನ್ ಎಲ್ಪಿಜಿಯನ್ನು ಹೊತ್ತು ಆಗಮಿಸುತ್ತಿರುವುದು ತೈಲ ಭೀತಿಯನ್ನು ಮತ್ತಷ್ಟು ದೂರ ಮಾಡಿದೆ.



