Monday, December 22, 2025

ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಲೆಜೆಂಡ್ಸ್ ಪ್ರೋ T20 ಲೀಗ್ ಗೆ ಆಸೀಸ್ ಬ್ಯಾಟ್ಸಮನ್ ಶೇನ್ ವ್ಯಾಟ್ಸನ್ ಎಂಟ್ರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟಿಗ ಶೇನ್ ವ್ಯಾಟ್ಸನ್ ಲೆಜೆಂಡ್ಸ್ ಪ್ರೋ T20 ಲೀಗ್‌ನಲ್ಲಿ ಮತ್ತೆ ಸ್ಪರ್ಧಿಸಲು ಸಿದ್ಧರಾಗಿದ್ದು, ಈ ಕುರಿತು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನ ಸಂಭ್ರಮವನ್ನು ಹಿಡಿದಿಟ್ಟುಕೊಂಡಿರುವ ಈ ಲೀಗ್‌ ಕಡಲತೀರದ ಮಧುರ ವಾತಾವರಣದಲ್ಲಿ ನಡೆಯುವುದರಿಂದ ಅಭಿಮಾನಿಗಳಿಗೆ ಮತ್ತಷ್ಟು ಉತ್ಸಾಹವನ್ನು ನೀಡಲಿದೆ ಎಂದು ಅವರು ಹೇಳಿದ್ದಾರೆ.

ಲೆಜೆಂಡ್ಸ್ ಪ್ರೋ T20 ಲೀಗ್‌ ಬಗ್ಗೆ ಮಾತನಾಡಿದ ವಾಟ್ಸನ್, “ಸ್ಪರ್ಧಾತ್ಮಕ ಮನೋಭಾವ ಇನ್ನೂ ನನ್ನೊಳಗೆ ಜೀವಂತವಾಗಿದೆ. ಚೆನ್ನಾಗಿ ಆಡುವ ಆಸೆ ಮತ್ತು ಹುಮ್ಮಸ್ಸು ಇಂದಿಗೂ ಇದೆ. ಈ ಲೀಗ್‌ನಲ್ಲಿ ಅದನ್ನೆಲ್ಲಾ ಆನಂದಿಸುತ್ತಿದ್ದೇನೆ” ಎಂದರು.

ವಾಟ್ಸನ್, ಲೀಗ್‌ನಲ್ಲಿ ಪರಿಚಿತ ಕ್ರಿಕೆಟ್ ಗಳ ಜೊತೆ ಮತ್ತೆ ಮೈದಾನ ಹಂಚಿಕೊಳ್ಳುತ್ತಿರುವುದಕ್ಕೆ ವಿಶೇಷ ಸಂತಸ ವ್ಯಕ್ತಪಡಿಸಿದರು.

ಹರ್ಭಜನ್ ಸಿಂಗ್, ಶಿಖರ್ ಧವನ್ ಮತ್ತು ಡೇಲ್ ಸ್ಟೇನ್ ಮೊದಲಾದ ಆಟಗಾರರ ಜೊತೆ ಆಡಲಿರುವುದರ ಕುರಿತು ಅವರು ಹೇಳಿದರು, ನಾವು ವರ್ಷಗಳ ಕಾಲ ಪರಸ್ಪರ ಎದುರಾಳಿಗಳಾಗಿದ್ದೇವೆ, ಒಂದೇ ಡ್ರೆಸ್ಸಿಂಗ್ ರೂಮಲ್ಲಿ ಸಮಯ ಕಳೆದಿದ್ದೇವೆ ಮತ್ತು ಜಗತ್ತಿನಾದ್ಯಂತ ಒಟ್ಟಿಗೆ ಪ್ರಯಾಣಿಸಿದ್ದೇವೆ. ಈಗ ಕಪ್‌ಗಳ ಒತ್ತಡವಿಲ್ಲದೆ ಆಟವನ್ನು ಆನಂದಿಸುವ ಅವಕಾಶ ಸಿಕ್ಕಿದೆ ಎಂದರು.

ಲೀಗ್ ನಡೆಯಲಿರುವ ಗೋವಾದ ಕುರಿತು ಮಾತನಾಡಿದ ವಾಟ್ಸನ್, “ಭಾರತದಲ್ಲಿ ನಾನು ಅನೇಕ ಸ್ಥಳಗಳಲ್ಲಿ ಆಡಿದ್ದೇನೆ, ಆದರೆ ಗೋವಾಕ್ಕೆ ತನ್ನದೇ ಆದ ವೈಬ್ ಇದೆ. ಆಸ್ಟ್ರೇಲಿಯಾದಲ್ಲಿ ನಾನು ಚಿಕ್ಕವನಿದ್ದಾಗ ಸ್ನೇಹಿತರೊಂದಿಗೆ ಕಡಲತೀರದಲ್ಲಿ ಆಡಿದ ಕ್ರಿಕೆಟ್ ದಿನಗಳನ್ನು ಇದು ನೆನಪಿಸುತ್ತದೆ. ಈ ಲೀಗ್ ನಿಜಕ್ಕೂ ಲೆಜೆಂಡ್ಸ್‌ಗಾಗಿ ಐಪಿಎಲ್‌ನಂತೆ ಅನಿಸುತ್ತದೆ. ನಮ್ಮನ್ನು ಇಷ್ಟು ವರ್ಷಗಳಿಂದ ಬೆಂಬಲಿಸುತ್ತಿರುವ ಅಭಿಮಾನಿಗಳು ಇನ್ನೂ ಅದೇ ಜೋಶ್‌ನಲ್ಲಿ ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.

ಲೆಜೆಂಡ್ಸ್ ಪ್ರೋ T20 ಲೀಗ್‌ಗೆ ಅಭಿಮಾನಿಗಳಿಂದ ಈಗಾಗಲೇ ಅದ್ಭುತ ಪ್ರತಿಕ್ರಿಯೆ ದೊರಕಿದ್ದು, ಈ ಸೀಸನ್ ಇನ್ನಷ್ಟು ರೋಚಕ ಪೈಪೋಟಿ ಮತ್ತು ಮನರಂಜನೆ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

error: Content is protected !!