WhatsApp ಯಿಂದ ಗ್ರಾಹಕರಿಗೆ ಗುಡ್ ನ್ಯೂಸ್: ವಾಯ್ಸ್ ನೋಟ್ ಅವಧಿ ವಿಸ್ತರಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಾಮಾಜಿಕ ಜಾಲತಾಣ ವಾಟ್ಸ್​​ಆ್ಯಪ್ (WhatsApp Update) ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದೆ. ಇದೀಗ ಧ್ವನಿ ಸಂದೇಶಗಳ (voice message) ಕಾಲಾವಧಿಯನ್ನು ಹೆಚ್ಚಿಸಿ ಹೊಸ ಅಪ್ಡೇಟ್ ನೀಡಿದೆ.

ಪ್ರಸ್ತುತ ವಾಟ್ಸ್ ಆಪ್ ಆವೃತ್ತಿಯು ಬಳಕೆದಾರರಿಗೆ ಕೇವಲ 30 ಸೆಕೆಂಡ್​ಗಳಷ್ಟು ಅವಧಿಯ ಧ್ವನಿ ಸಂದೇಶಗಳನ್ನು ಹಂಚಿಕೊಳ್ಳಲು ಮಾತ್ರ ಅನುಮತಿ ನೀಡುತ್ತಿತ್ತು. ಆದರೆ ಇನ್ನು ಮುಂದೆ ಸುಮಾರು ಒಂದು ನಿಮಿಷಗಳ ಕಾಲದ ಧ್ವನಿ ಸಂದೇಶವನ್ನು ವಾಟ್ಸ್​​ಆ್ಯಪ್​ ಮೂಲಕ ಕಳುಹಿಸಬಹುದು.

ಈ ಕುರಿತು ವಾಬೀಟಾಇನ್ಫೋ ನೀಡಿರುವ ಮಾಹಿತಿ ಪ್ರಕಾರ ಒಂದು ನಿಮಿಷದವರೆಗೆ ಧ್ವನಿ ಸಂದೇಶಗಳನ್ನು ಕಳುಹಿಸುವ ವಿಧಾನವನ್ನು ಬೆಂಬಲಿಸಲು ವಾಟ್ಸ್ ಆಪ್ ನ ಕಾರ್ಯವಿಧಾನಗಳನ್ನು ಅಪ್‌ಗ್ರೇಡ್ ಮಾಡಲಾಗಿದೆ. ಇದು ಇದು ಹಿಂದಿನ ಧ್ವನಿ ಸಂದೇಶ ಕಳುಹಿಸುವ ಮಿತಿಗಿಂತ ದ್ವಿಗುಣವಾಗಿದೆ ಎಂದು ತಿಳಿಸಿದೆ.

ಇನ್ನು ಮುಂದೆ ಧ್ವನಿ ರೂಪದಲ್ಲಿ ಸಂದೇಶಗಳನ್ನು ಹಂಚಿಕೊಳ್ಳಲು ಬಯಸುವ ಬಳಕೆದಾರರಿಗೆ ವಿಸ್ತೃತ ಅವಧಿಯ ಸಂದೇಶ ಕಳುಹಿಸಲು ಇದು ಪ್ರಯೋಜನಕಾರಿಯಾಗಲಿದೆ. ಇದರಿಂದ ಬಳಕೆದಾರರು ಇನ್ನು ಮುಂದೆ ತಮ್ಮ ಆಡಿಯೋ ರೆಕಾರ್ಡಿಂಗ್‌ಗಳನ್ನು ಹಲವು ಭಾಗಗಗಳಾಗಿ ವಿಭಜಿಸಬೇಕಾಗಿಲ್ಲ. ದೀರ್ಘಾವಧಿಯಲ್ಲಿ ಇದು ಲಭ್ಯವಾಗುವುದರಿಂದ ಸಮಯವನ್ನು ಉಳಿಸಲು ಮತ್ತು ಸಂವಹನ ಪ್ರೊಸೆಸರ್ ಅನ್ನು ಹೆಚ್ಚು ಅನುಕೂಲಕರವಾಗಿಸಲು ಸಹಾಯ ಮಾಡುತ್ತದೆ.

ನವೀಕರಣ ಮಾಡುವುದು ಹೇಗೆ?
ವಾಟ್ಸ್​​ಆ್ಯಪ್​ ನಲ್ಲಿರುವ ವಾಯ್ಸ್​ ನೋಟ್​ಗಳನ್ನು ಅಪ್ಡೇಡ್ ಮಾಡಲು ಫೋನ್‌ನಲ್ಲಿ ವಾಟ್ಸ್ ಆಪ್ ಅನ್ನು ತೆರೆಯಿರಿ. ಕೆಳಗಿನ ಬಾರ್‌ ನಲ್ಲಿರುವ ‘ಅಪ್‌ಡೇಟ್‌ಗಳು’ ಟ್ಯಾಬ್‌ಗೆ ಹೋಗಿ ಅಲ್ಲಿ ಪೆನ್ಸಿಲ್‌ನಂತಹ ಐಕಾನ್ ಮೇಲೆ ಟ್ಯಾಪ್ ಮಾಡಿ. ಈಗ, ಪರದೆಯ ಕೆಳಗಿನ ಬಲಭಾಗದಲ್ಲಿರುವ ಮೈಕ್ರೊಫೋನ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಬಳಿಕ ಒಂದು ನಿಮಿಷದ ಅವಧಿಯ ಧ್ವನಿ ಟಿಪ್ಪಣಿಯನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ. ಅನಂತರ ಅದನ್ನು ಹಂಚಿಕೊಳ್ಳಬಹುದು.

ಪರೀಕ್ಷೆ ಹಂತದಲ್ಲಿದೆ
ಒಂದು ನಿಮಿಷದ ಅವಧಿಯ ಈ ಧ್ವನಿ ಸಂದೇಶಗಳಿಗೆ ಅಪ್‌ಡೇಟ್‌ ಮಾಡುವ ಸಾಮರ್ಥ್ಯವು ಪ್ರಸ್ತುತ ಕೆಲವು ಬಳಕೆದಾರರಿಗೆ ಮಾತ್ರ ಸೀಮಿತವಾಗಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ. ಆದರೆ ಅದು ಯಾವಾಗ ಎನ್ನುವ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಕಳೆದ ಕೆಲವು ವಾರಗಳಿಂದ ವಾಟ್ಸ್ ಆಪ್ ನಿರಂತರವಾಗಿ ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದೆ. ಎಐ ರಚಿತ ಫೋಟೋಗಳನ್ನು ಪ್ರೊಫೈಲ್ ಚಿತ್ರಗಳಾಗಿ ಹೊಂದಿಸುವ ಸಾಮರ್ಥ್ಯದಂತಹ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಿದೆ. ಐಫೋನ್‌ಗಳಲ್ಲಿ ಪ್ರೊಫೈಲ್ ಚಿತ್ರಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳದಂತೆ ಬಳಕೆದಾರರನ್ನು ತಡೆಯಲು ಪ್ರಯತ್ನಿಸುತ್ತಿದೆ. ಕರೆ ಮಾಡುವವರನ್ನು ಹೆಸರಿಸಲು ಧ್ವನಿ ಕರೆಯನ್ನು ಮರುವಿನ್ಯಾಸಗೊಳಿಸಲಾಗುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!