Thursday, November 6, 2025

ಹೈನುಗಾರರಿಗೆ ಗುಡ್ ನ್ಯೂಸ್: ಸಿಹಿ ಮಾರಾಟದ ಸುನಾಮಿ ಸೃಷ್ಟಿಸಿದ ಧಾರವಾಡ ಹಾಲು ಒಕ್ಕೂಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಸರಾ ಮತ್ತು ದೀಪಾವಳಿ ಹಬ್ಬಗಳೆಂದರೆ ಸಾಕು, ಮಾರುಕಟ್ಟೆಯಲ್ಲಿ ಸಂಭ್ರಮ ಮನೆ ಮಾಡುತ್ತದೆ. ಎಷ್ಟೇ ಆರ್ಥಿಕ ಬಿಕ್ಕಟ್ಟುಗಳಿದ್ದರೂ ಜನರು ಈ ಹಬ್ಬಗಳ ಆಚರಣೆಯಲ್ಲಿ ಹಿಂದೆ ಬೀಳುವುದಿಲ್ಲ. ಇದರ ಪರಿಣಾಮವಾಗಿ ವ್ಯಾಪಾರ ವಹಿವಾಟು ಗರಿಗೆದರಿ, ಭಾರಿ ಲಾಭವನ್ನು ತರುತ್ತದೆ. ಇದೇ ಹಬ್ಬದ ಸೀಸನ್‌ನಲ್ಲಿ ಧಾರವಾಡದ ನಂದಿನಿ ಉತ್ಪನ್ನವು ಅಸಾಮಾನ್ಯ ದಾಖಲೆಯೊಂದನ್ನು ಬರೆದಿದೆ. ಕೇವಲ 20 ದಿನಗಳ ಅವಧಿಯಲ್ಲಿ 18.8 ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಧಾರವಾಡ ಕೆಎಂಎಫ್ ಹೊಸ ಮೈಲಿಗಲ್ಲನ್ನು ತಲುಪಿದೆ.

ಧಾರವಾಡ-ಹುಬ್ಬಳ್ಳಿ ರಸ್ತೆಯಲ್ಲಿ ಕಾರ್ಯ ನಿರ್ವಹಿಸುವ ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಈ ಸಾಧನೆ ಮಾಡಿದೆ. ಧಾರವಾಡ ಎಂದಾಕ್ಷಣ ನೆನಪಿಗೆ ಬರುವ ‘ಧಾರವಾಡ ಪೇಡಾ’ ಹೆಸರಿನಂತೆಯೇ, ಈಗಾಗಲೇ ಜಿಲ್ಲೆಯಲ್ಲಿ ಹಲವು ದಶಕಗಳಿಂದ ಪ್ರತಿಷ್ಠಿತ ಖಾಸಗಿ ಕಂಪನಿಗಳು ಸಿಹಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಿವೆ.

ಇಂತಹ ಪ್ರಬಲ ಸ್ಪರ್ಧೆಯ ನಡುವೆಯೂ ಧಾಮುಲ್ ಈ ಬಾರಿ ಗಮನಾರ್ಹ ಸಾಧನೆ ಮಾಡಿದೆ. ದಸರಾ ಆರಂಭದಿಂದ ದೀಪಾವಳಿಯ ಕೊನೆಯ ದಿನದವರೆಗೂ ಒಕ್ಕೂಟವು ಬರೋಬ್ಬರಿ 18.8 ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ ದಾಖಲೆ ಬರೆದಿದೆ. ಈ ಮೂಲಕ ಸುಮಾರು 80 ಲಕ್ಷ ರೂಪಾಯಿಗಳ ವಹಿವಾಟು ನಡೆಸಿದೆ ಎಂದು ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸ ಅವರು ತಿಳಿಸಿದ್ದಾರೆ.

ನಿರೀಕ್ಷೆ ಮೀರಿ ಸಿಕ್ಕ ಬೇಡಿಕೆ:

18.8 ಟನ್‌ನಷ್ಟು ಮಾರಾಟವಾದ ಸಿಹಿಯಲ್ಲಿ, ಹುಬ್ಬಳ್ಳಿ ಮತ್ತು ಬೆಂಗಳೂರಿನ ಡಿಪೋಗಳಿಗೆ 8,432 ಕೆ.ಜಿ. ಉತ್ಪನ್ನವನ್ನು ಪೂರೈಸಲಾಗಿದೆ. ಉಳಿದಂತೆ, ಒಕ್ಕೂಟದ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ 9,795 ಕೆ.ಜಿ. ಸಿಹಿ ಮಾರಾಟವಾಗಿದೆ. ವಾಸ್ತವವಾಗಿ, ಒಕ್ಕೂಟದ ಅಧಿಕಾರಿಗಳು ಈ ಅವಧಿಯಲ್ಲಿ ಕೇವಲ 15 ಟನ್ ಮಾರಾಟದ ಗುರಿ ಹೊಂದಿದ್ದರು. ಆದರೆ, ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾದ ಕಾರಣ ಹಗಲು-ರಾತ್ರಿ ಎನ್ನದೆ ವಿವಿಧ ರೀತಿಯ ಸಿಹಿ ಉತ್ಪನ್ನಗಳನ್ನು ಉತ್ಪಾದಿಸಲಾಯಿತು.

ಯಾವೆಲ್ಲ ಸಿಹಿ ಉತ್ಪನ್ನಗಳಿಗೆ ಬೇಡಿಕೆ?

ಧಾರವಾಡದ ಈ ಡೈರಿಯಲ್ಲಿ ಧಾರವಾಡ ಪೇಡಾ, ಬಿಳಿ ಪೇಡಾ, ಮೈಸೂರು ಪಾಕ್, ಹೆಸರು ಉಂಡೆ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಖಾಸಗಿ ಕಂಪನಿಗಳ ಪ್ರಾಬಲ್ಯವಿರುವ ಮಾರುಕಟ್ಟೆಯಲ್ಲಿ ಇಷ್ಟು ದೊಡ್ಡ ಗುರಿ ಸಾಧಿಸಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಹಾಲಿನ ಸಂಗ್ರಹದಲ್ಲೂ ಧಾಮುಲ್ ಮುಂದು: ಇತ್ತೀಚೆಗೆ ಹಾಲಿನ ಸಂಗ್ರಹದಲ್ಲೂ ಒಕ್ಕೂಟವು ಮಹತ್ವದ ಸಾಧನೆ ಮಾಡಿತ್ತು. ಈ ಹಿಂದೆ ದಿನವಹಿ ಸರಾಸರಿ 1,60,391 ಕೆಜಿ ಹಾಲು ಶೇಖರಣೆಯಾಗುತ್ತಿತ್ತು. ಆದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಅದು 2,23,023 ಲೀಟರ್‌ಗೆ ಏರಿಕೆಯಾಗಿತ್ತು. ಈ ಸಾಧನೆಯ ಬೆನ್ನಲ್ಲೇ, ಹಬ್ಬಗಳ ಸೀಸನ್‌ನಲ್ಲಿ ಅತಿ ಹೆಚ್ಚು ಸಿಹಿ ಮಾರಾಟ ಮಾಡುವ ಮೂಲಕ ಒಕ್ಕೂಟವು ಖಾಸಗಿ ಕಂಪನಿಗಳಿಗೆ ಸವಾಲೆಸೆದಿದೆ. ಸ್ಥಳೀಯರಾದ ಲಕ್ಷ್ಮಣ ಬಕಾಯಿ ಅವರ ಪ್ರಕಾರ, ಈ ಯಶಸ್ಸು ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಇನ್ನಷ್ಟು ಉತ್ಸಾಹವನ್ನು ತರಲಿದೆ.

error: Content is protected !!