ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಭಕ್ತರಿಗೆ ನೀಡುವ ಅನ್ನ ಪ್ರಸಾದದಲ್ಲಿ ಇನ್ನು ಮುಂದೆ ಮಸಾಲೆ ವಡೆಯನ್ನು ನೀಡುತ್ತಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಮತ್ತು ಇತರ ಅಧಿಕಾರಿಗಳು ಇಂದು ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದಂ ಭವನದಲ್ಲಿ ‘ಮಸಾಲಾ ವಡಾ’ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಕ್ತರಿಗೆ ರುಚಿಕರವಾದ ‘ಮಸಾಲೆ ವಡೆ’ ನೀಡುವ ಕಾರ್ಯಕ್ರಮವನ್ನು ಬಿಆರ್ ನಾಯ್ಡು ಇಂದು ಬೆಳಗ್ಗೆ ಪ್ರಾರಂಭಿಸಿದರು ಎಂದು ದೇವಸ್ಥಾನದ ಅಧಿಕೃತ ಪ್ರಕಟಣೆ ತಿಳಿಸಿದೆ.
ಅನ್ನ ಪ್ರಸಾದ ಮೆನುವಿನಲ್ಲಿ ಹೆಚ್ಚುವರಿ ತಿಂಡಿಯನ್ನು ಸೇರಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಕಳುಹಿಸಿ ಕೊಡಲಾಗಿತ್ತು. ಮುಖ್ಯಮಂತ್ರಿಗಳು ಅದನ್ನು ಅನುಮೋದಿಸಿದ್ದಾರೆ.
ಬೇಳೆಕಾಳು, ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವಿನ ಎಲೆ, ಕೊತ್ತಂಬರಿ, ಪುದೀನಾ ಎಲೆಗಳು ಮತ್ತು ಇತರ ವಸ್ತುಗಳನ್ನು ಬಳಸಿ ತಯಾರಿಸಲಾದ ವಡೆಯ ಸೇರ್ಪಡೆಯು ಅನ್ನ ಪ್ರಸಾದವನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ. ಅನ್ನ ಪ್ರಸಾದ ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 4 ರವರೆಗೆ ಭಕ್ತರಿಗೆ 35,000 ಮಸಾಲಾ ವಡೆಗಳನ್ನು ನೀಡಲಾಗುವುದು.ಭವಿಷ್ಯದಲ್ಲಿ ವಡೆಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು ಮತ್ತು ಭಕ್ತರಿಗೆ ಇನ್ನಷ್ಟು ರುಚಿಕರವಾದ ಆಹಾರವನ್ನು ಬಡಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷರು ಹೇಳಿದರು.