ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಜಿಲ್ಲೆಯ ಆಧ್ಯಾತ್ಮಿಕ ತಾಣ ಚಾಮುಂಡಿ ಬೆಟ್ಟಕ್ಕೆ ಅಷಾಢ ಮಾಸದ ಶುಕ್ರವಾರಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುವುದು ಸಂಪ್ರದಾಯ. ಈ ಬಾರಿ, ಭಕ್ತರ ಅನುಕೂಲಕ್ಕಾಗಿ ಮತ್ತು ಗೌರವ ಸೂಚಿಸಲು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ (Sri Chamundeshwari Temple Authority) ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಧರ್ಮದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಿಶಿಷ್ಟ ಸೇವೆ ರೂಪಿಸಲಾಗಿದೆ.
ಪ್ರಾಧಿಕಾರದಿಂದ ಅಷಾಢ ಶುಕ್ರವಾರದಂದು ಬೆಟ್ಟದ ಮೆಟ್ಟಿಲುಗಳಿಂದ ಅಥವಾ ಸರತಿ ಸಾಲಿನಲ್ಲಿ ಏರುತ್ತಿರುವ ಭಕ್ತರಿಗೆ, ಶಕ್ತಿವರ್ಧಕ ಡ್ರೈ ಫ್ರೂಟ್ಸ್ ಪಾಕೆಟ್ (ಸುಮಾರು 30-40 ಗ್ರಾಂ) ಹಾಗೂ ಬಾದಾಮಿ ಹಾಲು ವಿತರಣೆ ಮಾಡಲಾಗುತ್ತದೆ. ಮಳೆಯಾದರೂ, ಬೇಸೆಯಾಗಿದ್ದರೂ, ಚಾಮುಂಡಿತಾಯಿಗೆ ಅರ್ಚನೆ ಮಾಡುವ ಉತ್ಸಾಹದಲ್ಲಿ ಆಗಮಿಸುವ ಭಕ್ತರಿಗೆ ಈ ಸೇವೆ ದೊಡ್ಡ ಸಮಾಧಾನ ನೀಡಲಿದೆ.
ಈ ವಿಶೇಷ ಯೋಜನೆ ಜೊತೆಗೆ ಬೆಟ್ಟದ ನಿರ್ಗಮನ ದ್ವಾರದಲ್ಲಿ ಎಲ್ಲಾ ಭಕ್ತರಿಗೂ ಚಾಮುಂಡಿ ತಾಯಿಯ ಅರ್ಚನೆ ಕುಂಕುಮ ದೊರೆಯಲಿದ್ದು, 18 ವರ್ಷ ಮೇಲ್ಪಟ್ಟ ಮಹಿಳಾ ಭಕ್ತರಿಗೆ ಬ್ಲೌಸ್ ಪೀಸ್, ಬಳೆ, ಅಕ್ಕಿ ಮೊದಲಾದವುಗಳೊಂದಿಗೆ ಬಾಗಿನ ಪ್ಯಾಕೆಟ್ ಕೂಡ ನೀಡಲಾಗುವುದು. ಜುಲೈ 17ರಂದು ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್ ಜೊತೆಗೆ ಗೋಧಿ ಲಡ್ಡುಗಳೂ ಭಕ್ತರಿಗೆ ಉಚಿತವಾಗಿ ವಿತರಿಸಲಾಗುತ್ತದೆ.
ಆಧ್ಯಾತ್ಮದ ಜೊತೆಗೆ ಸೇವೆಯ ನಿಷ್ಠೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧ್ಯವಾಗಿರುವ ಈ ಯೋಜನೆ, ಭಕ್ತರ ನಡುವೆ ಸಂತೋಷ ಮತ್ತು ಧರ್ಮಾಭಿಮಾನ ಹೆಚ್ಚಿಸುವಲ್ಲಿ ಯಶಸ್ವಿಯಾಗಲಿದೆ.