ಕೃಷಿಕರಿಗೆ ಗುಡ್ ನ್ಯೂಸ್: ಕೃಷಿ ಸಾಲದ ಮೇಲೆ ಶೇ.1.5ರಷ್ಟು ಬಡ್ಡಿ ಸಬ್ಸಿಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೇಂದ್ರ ಸರ್ಕಾರದಿಂದ ಅನ್ನದಾತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಅಲ್ಪಾವಧಿಯ ಕೃಷಿ ಸಾಲದ ಬಡ್ಡಿಗೆ ಸಹಾಯಧನ ಘೋಷಿಸಲಾಗಿದ್ದು 3 ಲಕ್ಷ ರೂ ವರೆಗಿನ ಸಾಲಕ್ಕೆ ಶೇ.1.5ರಷ್ಟು ಬಡ್ಡಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಲ್ಪಾವಧಿ ಕೃಷಿ ಸಾಲಗಳಿಗೆ ಬಡ್ಡಿ ಸಬ್ಸಿಡಿಯನ್ನು ಮರುಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಮೂಲಕ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಸಾಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಭೆಯ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.

ಸಾರ್ವಜನಿಕ ವಲಯದ ಬ್ಯಾಂಕ್​ಗಳು, ಖಾಸಗಿ ವಲಯದ ಬ್ಯಾಂಕ್​ಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳು, ಸಹಕಾರಿ ಬ್ಯಾಂಕುಗಳು ಸೇರಿ ಕೃಷಿ ಸಾಲ ನೀಡುವ ಎಲ್ಲ ಹಣಕಾಸು ಸಂಸ್ಥೆಗಳು ಶೇ.1.5ರ ಬಡ್ಡಿ ಸಬ್ಸಿಡಿ ಪಡೆಯುತ್ತವೆ. ಈ ಯೋಜನೆಯು 2022-23 ಮತ್ತು 2024-25ನೇ ಆರ್ಥಿಕ ವರ್ಷದಲ್ಲಿ 3 ಲಕ್ಷ ರೂ.ಗಳೊಳಗಿನ ಕೃಷಿ ಸಾಲಗಳಿಗೆ ಅನ್ವಯಿಸುತ್ತದೆ ಎಂದು ಮಾಹಿತಿ ನೀಡಿದರು.

ಇದರಿಂದ ಸರ್ಕಾರದ ಬಜೆಟ್ ಮೇಲೆ ರೂ.34,856 ಕೋಟಿ ರೂಪಾಯಿಗಳಷ್ಟು ಹೊರೆಯಾಗುತ್ತದೆ. ಆದರೆ, ಬಡ್ಡಿ ಸಬ್ಸಿಡಿಯಿಂದ ಕೃಷಿ ಕ್ಷೇತ್ರಕ್ಕೆ ಲಾಭವಾಗುವುದಲ್ಲದೇ, ಸಾಲ ನೀಡುವ ಸಂಸ್ಥೆಗಳು ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸಚಿವರು ವಿವರಿಸಿದರು.
ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಹೆಚ್ಚಳ
ಇದರ ಜೊತೆಗೆ ಆಸ್ಪತ್ರೆ ಮತ್ತು ಪ್ರವಾಸ ವಲಯಗಳಿಗೆ ಸಂಬಂಧಿಸಿದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯ ವೆಚ್ಚವನ್ನು 50 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಒಟ್ಟಾರೆ 4.5 ಲಕ್ಷ ಕೋಟಿಗಳಿಂದ 5 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹೆಚ್ಚುವರಿ ಮೊತ್ತವನ್ನು ಸೇವಾ ಸಂಬಂಧಿತ ವಲಯಗಳ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಸಚಿವ ಅನುರಾಗ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!