Saturday, January 24, 2026
Saturday, January 24, 2026
spot_img

ಮುಷ್ಕರಕ್ಕೆ ರೆಡಿ ಆಗಿದ್ದ ಗಿಗ್ ಕಾರ್ಮಿಕರಿಗೆ ಗುಡ್ ನ್ಯೂಸ್: ಡೆಲಿವರಿ ಪಾರ್ಟ್ನರ್ ಗಳಿಗೆ ವೇತನ ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗಿರುವ ನಡುವೆಯೇ, ಗಿಗ್ ಮತ್ತು ಫುಡ್ ಡೆಲಿವರಿ ವಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ದೇಶಾದ್ಯಂತ ಗಿಗ್ ಕಾರ್ಮಿಕರು ಡಿಸೆಂಬರ್ 31ರಂದು ಮುಷ್ಕರಕ್ಕೆ ಕರೆ ನೀಡಿದ್ದರು.

ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ಪರಿಸ್ಥಿತಿಗಳು, ಅತಿವೇಗದ ವಿತರಣಾ ಒತ್ತಡ ರದ್ದುಪಡಿಸುವುದು ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳಿಗಾಗಿ ಗಿಗ್ ಕಾರ್ಮಿಕರು ಈ ಮುಷ್ಕರಕ್ಕೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಫುಡ್ ಡೆಲಿವರಿ ಹಾಗೂ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಕಾರ್ಯಾಚರಣೆಗೆ ಅಡಚಣೆ ಉಂಟಾಗುವ ಆತಂಕ ವ್ಯಕ್ತವಾಗಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಿಗ್ಗಿ ಮತ್ತು ಜೊಮ್ಯಾಟೊ ಹೊಸ ವರ್ಷದ ಪೀಕ್ ಅವರ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಡೆಲಿವರಿ ಪಾರ್ಟ್ನರ್‌ಗಳಿಗೆ ಹೆಚ್ಚುವರಿ ಪ್ರೋತ್ಸಾಹ ಘೋಷಿಸಿವೆ. ಹೊಸ ವರ್ಷದಂದು ಪ್ರತಿ ಆರ್ಡರ್‌ಗೆ 120 ರಿಂದ 150 ರೂ.ವರೆಗೆ ಪಾವತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಹೊಸ ವರ್ಷದ ಸಂಭ್ರಮದ ವೇಳೆ ಆಹಾರ ಹಾಗೂ ದಿನಸಿ ವಿತರಣೆಗೆ ಭಾರಿ ಬೇಡಿಕೆ ಇರುವುದರಿಂದ, ಮುಷ್ಕರದಿಂದ ಸೇವೆಗಳು ವ್ಯತ್ಯಯಗೊಳ್ಳದಂತೆ ನೋಡಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ. ವರದಿಗಳ ಪ್ರಕಾರ, ಆರ್ಡರ್ ಪ್ರಮಾಣ ಹಾಗೂ ಕಾರ್ಮಿಕರ ಲಭ್ಯತೆಯನ್ನು ಅವಲಂಬಿಸಿ ದಿನಕ್ಕೆ 3,000 ರೂ.ವರೆಗೆ ಗಳಿಕೆ ಸಾಧ್ಯವಾಗುವ ಭರವಸೆಯನ್ನು ನೀಡಲಾಗಿದೆ.

ಇದಕ್ಕೂ ಜೊತೆಗೆ, ಜೊಮ್ಯಾಟೊ ಪೀಕ್ ಅವರ್ ಅವಧಿಯಲ್ಲಿ ಆರ್ಡರ್ ನಿರಾಕರಣೆ ಹಾಗೂ ರದ್ದತಿಗೆ ವಿಧಿಸುವ ದಂಡವನ್ನು ತಾತ್ಕಾಲಿಕವಾಗಿ ಮನ್ನಾ ಮಾಡಿದೆ. ಹಬ್ಬದ ದಿನಗಳಲ್ಲಿ ಇಂತಹ ಹೆಚ್ಚುವರಿ ಪ್ರೋತ್ಸಾಹ ನೀಡುವುದು ಕಂಪನಿಗಳ ರೂಢಿಯಾಗಿದೆ ಎಂದು ಹೇಳಲಾಗುತ್ತಿದೆ.

Must Read