ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೂನ್ 6 ರಂದು ನಡೆದ ಹಣಕಾಸು ನೀತಿ ಸಮಿತಿಯ (MPC) ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಬ್ಯಾಂಕ್ ತನ್ನ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಇಳಿಸಿ ಶೇಕಡಾ 5.5ಕ್ಕೆ ತರಲಾಗಿದೆ. ಈ ಕ್ರಮದಿಂದ ಗೃಹ ಸಾಲದ ಬಡ್ಡಿದರ ಇಳಿಕೆಯ ಮೂಲಕ ಜನಸಾಮಾನ್ಯರಿಗೆ, ವಿಶೇಷವಾಗಿ ಮನೆ ನಿರ್ಮಾಣ ಅಥವಾ ಖರೀದಿಗೆ ಯೋಜನೆ ರೂಪಿಸುತ್ತಿರುವವರಿಗೆ ಬಂಪರ್ ಲಾಭ ದೊರೆಯಲಿದೆ.
ಈ ನಿರ್ಧಾರ 2025ರ ಮೊದಲಾರ್ಧದಲ್ಲಿ ರೆಪೋ ದರ ಇಳಿಕೆಯಾಗಿ ಮೂರನೇ ಬಾರಿ ನಡೆಯುತ್ತಿದೆ. ಇದಕ್ಕೂ ಮುನ್ನ ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ತಲಾ 25 ಬೇಸಿಸ್ ಪಾಯಿಂಟ್‌ಗಳ ಕಡಿತ ಮಾಡಲಾಗಿತ್ತು. ಇವುಗಳ ಒಟ್ಟು ಪರಿಣಾಮವಾಗಿ ಈವರೆಗೂ ಶೇಕಡಾ 1ರಷ್ಟು ಬಡ್ಡಿದರ ಕಡಿತವಾಗಿದೆ. ಇದರ ಪರಿಣಾಮವಾಗಿ ರಿಯಲ್ ಎಸ್ಟೇಟ್ ವಲಯ ಪುನಶ್ಚೇತನಗೊಂಡು, ಮನೆಗಳ ಖರೀದಿ ಹೆಚ್ಚಾಗುವ ನಿರೀಕ್ಷೆಯಿದೆ.
ಬಡ್ಡಿದರ ಇಳಿಕೆಯ ಬಳಿಕ ಗೃಹ ಸಾಲದ ಕಂತು (EMI) ಕಡಿಮೆಯಾಗುವ ಸಾಧ್ಯತೆಯಿದೆ. ಉದಾಹರಣೆಗೆ, 50 ಲಕ್ಷ ರೂಪಾಯಿ ಗೃಹ ಸಾಲದ EMI ಸುಮಾರು 3,000ರಷ್ಟು ಕಡಿಮೆಯಾಗಬಹುದು. ಇದೇ EMI ಅನ್ನು ಮುಂದುವರಿಸಿ ಅವಧಿಯನ್ನು ಕಡಿಮೆ ಮಾಡಿದರೆ, ಸುಮಾರು 15 ಲಕ್ಷದಷ್ಟು ಒಟ್ಟು ಬಡ್ಡಿ ಉಳಿತಾಯ ಸಾಧ್ಯವಾಗುತ್ತದೆ. ಹೀಗಾಗಿ ಸಾಲಗಾರರಿಗೆ ಹಣದ ನಿರ್ವಹಣೆಯಲ್ಲಿ ದೊಡ್ಡ ಸಹಾಯವಾಗಲಿದೆ. ಸಾಲದ ಪ್ರಮಾಣ ಮತ್ತು ಅವಧಿಗೆ ಅನುಗುಣವಾಗಿ ಈ ಬಡ್ಡಿದರ ಇಳಿಕೆ ಹಲವಾರು ಲಕ್ಷ ರೂಪಾಯಿಗಳ ಉಳಿತಾಯಕ್ಕೆ ಕಾರಣವಾಗಲಿದೆ.