ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆಂಟ್ರಲ್ ರೈಲ್ವೆಯ ಲೋಕೋ ಪೈಲಟ್‌ಗಳು ಮತ್ತು ಮೋಟಾರ್‌ಮೆನ್‌ಗಳು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದು, ಹೀಗಾಗಿ, ಸುಡುಬಿಸಿಲಿನ ಪ್ರಖರತೆಯಿಂದ ರಿಲೀಫ್ ನೀಡುವುದಕ್ಕಾಗಿ ಅವರ ಕ್ಯಾಬಿನ್‌ಗಳಲ್ಲಿ ಎಸಿ ಅಳವಡಿಸಲು ಕೇಂದ್ರ ರೈಲ್ವೆ ನಿರ್ಧರಿಸಿದೆ.
ತೀವ್ರವಾದ ಬೇಸಿಗೆಯಿಂದ ಮೇಲ್ ಎಕ್ಸ್‌ಪ್ರೆಸ್ ಅಥವಾ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರು ನಿರ್ಜಲೀಕರಣದಿಂದಾಗಿ ತಲೆಸುತ್ತು ಬಂದು ಬೀಳುತ್ತಿದ್ದರು. ಇದಕ್ಕೆ ಪರಿಹಾರವೆಂಬಂತೆ ರೈಲ್ವೆಯ ಪ್ಯಾಸೆಂಜರ್ ಕೋಚ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫ್ಯಾನ್ಗಳನ್ನು ಅಳವಡಿಸಲಾಗಿತ್ತು. ಈಗ ಮೇಲ್ ಎಕ್ಸ್ಪ್ರೆಸ್ನಲ್ಲಿ ಸಂಪೂರ್ಣ ಹವಾನಿಯಂತ್ರಣ ಅಳವಡಿಸಲಾಗಿದೆ.
ಇದೀಗ ಲೊಕೊ ಪೈಲಟ್ ಕ್ಯಾಬಿನ್‌ನಲ್ಲಿ ಅಂತಹ ಯಾವುದೇ ಸೌಲಭ್ಯಗಳಿಲ್ಲದಿರುವುದರಿಂದಾಗಿ ಇಂಜಿನ್‌ಗಳು ಮತ್ತು ಸ್ಥಳೀಯ ರೈಲುಗಳ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸಲು ಕೇಂದ್ರ ರೈಲ್ವೆ ನಿರ್ಧರಿಸಿದೆ.
‘ಕೇಂದ್ರ ರೈಲ್ವೆಯ 1,107 ಇಂಜಿನ್‌ಗಳಲ್ಲಿ 636 ಇಂಜಿನ್‌ಗಳಲ್ಲಿ ಎಸಿ ಅಳವಡಿಸಲಾಗಿದೆ. ಇದಲ್ಲದೇ ಸುಮಾರು 250 ಇಂಜಿನ್‌ಗಳಲ್ಲಿ ಎಸಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಮೇಲ್ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ಎಂಜಿನ್‌ಗಳು ಸೇರಿವೆ. ಉಳಿದ 200 ಇಂಜಿನ್‌ಗಳಲ್ಲಿ ತಾಂತ್ರಿಕ ತೊಂದರೆ ಹಾಗೂ ಇತರ ಕಾರಣಗಳಿಂದಾಗಿ ಎಸಿ ಅಳವಡಿಸುವ ಸಾಧ್ಯತೆ ಸದ್ಯಕ್ಕೆ ಸಾಧ್ಯವಿಲ್ಲ’ ಎಂದು ಕೇಂದ್ರ ರೈಲ್ವೆ ಸಾರ್ವಜನಿಕ ವಲಯದ ಮುಖ್ಯಾಧಿಕಾರಿ ಡಾ. ಸ್ವಪ್ನಿಲ್ ನೀಲಾ ಅವರು ತಿಳಿಸಿದ್ದಾರೆ.