ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಬಹುನಿರೀಕ್ಷಿತ ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಹಳದಿ ಮಾರ್ಗದ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ಈ ಮಾರ್ಗದ ತಪಾಸಣೆ ಜುಲೈ 22ರಿಂದ 25ರ ವರೆಗೆ ನಡೆಯಲಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು(CMRS) ಈ ಕಾಲಾವಧಿಯಲ್ಲಿ ವಿವಿಧ ಹಂತಗಳಲ್ಲಿ ಮಾರ್ಗದ ಪರಿಶೀಲನೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ.
ಸುಮಾರು 19.15 ಕಿಲೋಮೀಟರ್ ಉದ್ದದ ಈ ಎತ್ತರದ ಮಾರ್ಗವು ಒಟ್ಟು 16 ನಿಲ್ದಾಣಗಳನ್ನು ಹೊಂದಿದ್ದು, ಮೊದಲಿಗೆ ಡಿಸೆಂಬರ್ 2021ರೊಳಗೆ ಪೂರ್ಣಗೊಳಿಸುವ ಗುರಿ ಇಟ್ಟಿದ್ದರೂ ನಾಗರಿಕ ಮತ್ತು ತಾಂತ್ರಿಕ ಅಡಚಣೆಗಳಿಂದಾಗಿ ವಿಳಂಬವಾಗಿದೆ. ಇದೀಗ ಎಲ್ಲ ತಾಂತ್ರಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಪರಿಶೀಲನೆ ನಡೆಯಲಿದೆ. ಟ್ರ್ಯಾಕ್, ವಯಾಡಕ್ಟ್, ನಿಲ್ದಾಣ ಸೌಲಭ್ಯಗಳು, ಸಿಗ್ನಲಿಂಗ್ ವ್ಯವಸ್ಥೆಗಳು ಸೇರಿದಂತೆ ಎಲ್ಲಾ ಮುಖ್ಯ ಘಟಕಗಳ ತಪಾಸಣೆ ಈ ಅವಧಿಯಲ್ಲಿ ನಡೆಯಲಿದೆ.
ಹಳದಿ ಮಾರ್ಗದ ಪ್ರಮುಖ ವಿಭಾಗವಾದ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದ ಡೆಲ್ಟಾ ಎಲೆಕ್ಟ್ರಾನಿಕ್ಸ್ ವರೆಗೆ ಜುಲೈ 22ರಿಂದ 24ರವರೆಗೆ ತಪಾಸಣೆ ನಡೆಯಲಿದೆ. ಜುಲೈ 25ರಂದು ಕಾರ್ಯಾಚರಣೆ ನಿಯಂತ್ರಣ ಕೇಂದ್ರದ (OCC) ಅಂತಿಮ ತಪಾಸಣೆ ನಿಗದಿಯಾಗಿದೆ. CMRS ಅನುಮೋದನೆಯ ನಂತರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ತೀರ್ಮಾನಿಸಿಕೊಂಡು ಈ ಮಾರ್ಗವನ್ನು ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.
ಇದರ ನಡುವೆ ಬಿಎಂಆರ್‌ಸಿಎಲ್ (BMRCL) ಹಳದಿ ಮಾರ್ಗದ ಉದ್ಘಾಟನೆಗೆ ಸಜ್ಜಾಗಿದ್ದು, ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸುವ ಸಾಧ್ಯತೆ ಇದೆ. ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಲಾಗಬಹುದು ಎಂಬ ವರದಿ ಕೂಡ ಹೊರಬಿದ್ದಿದೆ. ಬಿಎಂಆರ್‌ಸಿಎಲ್ ಇದಕ್ಕಾಗಿ ಡ್ರೋನ್ ದೃಶ್ಯಗಳು, ನಿಲ್ದಾಣಗಳ ವೀಕ್ಷಣಾ ವಿಡಿಯೋಗಳು ಸೇರಿದ ಸಾಕ್ಷ್ಯಚಿತ್ರವನ್ನು ತಯಾರಿಸುತ್ತಿದೆ.