ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2025 ರಲ್ಲಿ ಮಾರಾಟವಾಗದೆ ಉಳಿದಿದ್ದ ಪೃಥ್ವಿ ಶಾ ಅವರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಹೌದು! ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಪೃಥ್ವಿ ಶಾ ಅವರಿಗೆ ಐಕಾನ್ ಪ್ಲೇಯರ್ ಸ್ಥಾನಮಾನ ನೀಡಿದೆ.
ಐಪಿಎಲ್ 2025 ರ ಬಳಿಕ, ಈಗ ಟಿ-20 ಮುಂಬೈ ಲೀಗ್ ಮುಂಬೈನಲ್ಲಿ ಪ್ರಾರಂಭವಾಗಲಿದೆ. 6 ವರ್ಷಗಳ ಬ್ರೇಕ್ ಬಳಿಕ ಈ ಟೂರ್ನಿ ಈಗ ಮತ್ತೆ ಆರಂಭಗೊಳ್ಳುತ್ತಿದೆ. ಈ ಸ್ಪರ್ಧೆಯ ಮೂರನೇ ಸೀಸನ್ ಮೇ 26 ರಿಂದ ಜೂನ್ 8 ರವರೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಈಗ ಈ ಟೂರ್ನಮೆಂಟ್‌ಗಾಗಿ ಪ್ರತಿಷ್ಠಿತ ಆಟಗಾರರ ತಾರಾ ಬಳಗವನ್ನು ಪ್ರಕಟಿಸಿದೆ. ಇದರಲ್ಲಿ, ಭಾರತೀಯ ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ಮತ್ತು ಅಜಿಂಕ್ಯ ರಹಾನೆ ಇದ್ದಾರೆ. ಅಲ್ಲದೆ, ಭಾರತದ ಪ್ರಮುಖ ಫ್ರಾಂಚೈಸಿ ಆಧಾರಿತ ದೇಸೀಯ ಟಿ-20 ಪಂದ್ಯಾವಳಿಗಳಲ್ಲಿ ಒಂದಾದ ಐಕಾನಿಕ್ ಆಟಗಾರರ ಪಟ್ಟಿಯಲ್ಲಿ ಸರ್ಫರಾಜ್ ಖಾನ್, ಶಾರ್ದುಲ್ ಠಾಕೂರ್, ಪೃಥ್ವಿ ಶಾ, ಶಿವಂ ದುಬೆ ಮತ್ತು ತುಷಾರ್ ದೇಶಪಾಂಡೆ ಸೇರಿದ್ದಾರೆ. ಈ 8 ಆಟಗಾರರೂ ಭಾರತವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ.