ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿದ್ಯಾರ್ಥಿಗಳಿಗೆ ಈಗಾಗಲೇ ಹೊಸ ಬಸ್ ಪಾಸ್ ಗಾಗಿ ಅರ್ಜಿ ಹಾಕಲು ಸೂಚಿಸಿರುವ ಕೆ ಎಸ್ ಆರ್ ಟಿ ಸಿ, ಇದೀಗ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪಾಸ್ ಇಲ್ಲದ ಕಾರಣಕ್ಕೆ ಶೈಕ್ಷಣಿಕ ಚಟುವಟಿಕೆಗೆ ತೊಂದರೆ ಆಗದಂತೆ ಜೂನ್.30ರವರೆಗೆ ಉಚಿತವಾಗಿ ಸಾರಿಗೆ ಬಸ್ ಗಳಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ( Karnataka State Road Transport Corporation – KSRTC ) ಮುಖ್ಯ ಸಂಚಾರ ವ್ಯವಸ್ಥಾಪಕರು, ಜೂನ್ 2023ರಿಂದ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದು, ಬಸ್ ಪಾಸ್ ಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಲು ಜೂ . 12 ರಿಂದ ಶುರು ಮಾಡಲಾಗಿದೆ. ಹೀಗಾಗಿ ಪಾಸುಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಮತ್ತಷ್ಟು ಕಾಲಾವಕಾಶ ನೀಡಿರುವ ಕಾರಣ, ಎಲ್ಲಾ ವರ್ಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಳೆದ ಸಾಲಿನ (2022-23) ಬಸ್ ಪಾಸ್ ನೊಂದಿಗೆ ಅಥವಾ ಪ್ರಸ್ತುತ ಸಾಲಿನ ಶಾಲಾ-ಕಾಲೇಜುಗಳಿಗೆ ಪಾವತಿಸಿರುವ ರಸೀದಿ ಜೊತೆಗೆ ನಿಗಮದ ಬಸ್ಸುಗಳಲ್ಲಿ ಸಂಬಂಧ ಪಟ್ಟ ಮಾರ್ಗದಲ್ಲಿ ಅಥವಾ ಹೊಸ ವಿಳಾಸದಲ್ಲಿರುವ ಶಾಲಾ-ಕಾಲೇಜುಗಳಿಗೆ ತೆರಳಲು ಜೂ . 30 ರವರೆಗೆ ಅವಕಾಶ ನೀಡಿರುವುದಾಗಿ ಹೇಳಿದ್ದಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಹಿಂದಿನ ವರ್ಷದ ಪಾಸನ್ನು ಹಾಜರುಪಡಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.