February 25, 2026
Wednesday, February 25, 2026
spot_img

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: 300 ಕೋಟಿ ರೂ. ಸರ್ಕಾರಿ ನೆರವು ಬಿಡುಗಡೆ!

ಹೊಸದಿಗಂತ ವಿಜಯಪುರ:

ರಾಜ್ಯದ ಕಬ್ಬು ಬೆಳೆಗಾರರ ಪಾಲಿಗೆ ರಾಜ್ಯ ಸರ್ಕಾರವು ಮಹತ್ವದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. 2025-26ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಘೋಷಿಸಿದಂತೆ ಪ್ರತಿ ಟನ್‌ಗೆ ₹50 ರಂತೆ ಒಟ್ಟು ₹300 ಕೋಟಿ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗಿದೆ ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎಫ್‌ಆರ್‌ಪಿ ದರಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಟನ್‌ಗೆ ₹100 ನೀಡಲು ನಿರ್ಧರಿಸಲಾಗಿತ್ತು.

ರಾಜ್ಯ ಸರ್ಕಾರದ ಪಾಲು: ₹50 ಈಗ ಬಿಡುಗಡೆಯಾಗಿರುವ ಮೊತ್ತ.

ಸಕ್ಕರೆ ಕಾರ್ಖಾನೆಗಳ ಪಾಲು: ₹50 ಇದನ್ನು ನೀಡಲು ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ರೈತರು ಪೂರೈಸಿದ ಕಬ್ಬಿನ ಪ್ರಮಾಣಕ್ಕೆ ಅನುಗುಣವಾಗಿ, ಈ ಆರ್ಥಿಕ ನೆರವು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ. ಈ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ನಡೆಸಲು ಕಬ್ಬು ಅಭಿವೃದ್ಧಿ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.

ಪ್ರಸಕ್ತ ಹಂಗಾಮಿನಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸಿವೆ. ಇದುವರೆಗೆ 521 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದ್ದು, ಹಂಗಾಮಿನ ಅಂತ್ಯಕ್ಕೆ ಇದು 600 ಲಕ್ಷ ಮೆಟ್ರಿಕ್ ಟನ್‌ ತಲುಪುವ ನಿರೀಕ್ಷೆಯಿದೆ.

ಮಾರ್ಚ್ ಮೊದಲ ವಾರದ ವೇಳೆಗೆ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಸರ್ಕಾರದ ಈ ಕ್ರಮವು ಬೆಲೆ ಕುಸಿತ ಹಾಗೂ ಉತ್ಪಾದನಾ ವೆಚ್ಚದಿಂದ ಕಂಗೆಟ್ಟಿದ್ದ ರೈತರಿಗೆ ಸ್ವಲ್ಪಮಟ್ಟಿನ ಆರ್ಥಿಕ ಚೈತನ್ಯ ನೀಡುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !