ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿದ್ದು, ಈ ನಡುವೆ ಇಂದುಮುಖ್ಯಮಂತ್ರಿ ನಿತೀಶ್ ಕುಮಾರ್ ಆಗಸ್ಟ್ 1, 2025 ರಿಂದ, ಅಂದರೆ ಜುಲೈ ಬಿಲ್ಲಿಂಗ್ ಸಮಯದಿಂದ ರಾಜ್ಯದ ಎಲ್ಲ ಗೃಹ ಬಳಕೆದಾರರಿಗೆ 125 ಯೂನಿಟ್‌ಗಳವರೆಗಿನ ವಿದ್ಯುತ್ (Electricity) ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಎಕ್ಸ್‌ನಲ್ಲಿ ಈ ನಿರ್ಧಾರವನ್ನು ಘೋಷಿಸಿದ ನಿತೀಶ್ ಕುಮಾರ್, “ನಾವು ಆರಂಭದಿಂದಲೂ ಕೈಗೆಟುಕುವ ದರದಲ್ಲಿ ಎಲ್ಲರಿಗೂ ವಿದ್ಯುತ್ ಒದಗಿಸುತ್ತಿದ್ದೇವೆ. ಇದೀಗ, ಆಗಸ್ಟ್ 1, 2025ರಿಂದ ರಾಜ್ಯದ ಎಲ್ಲ ಗೃಹ ಬಳಕೆದಾರರಿಗೆ 125 ಯೂನಿಟ್‌ಗಳವರೆಗಿನ ವಿದ್ಯುತ್‌ಗೆ ಯಾವುದೇ ಶುಲ್ಕ ಇರುವುದಿಲ್ಲ” ಎಂದು ಬರೆದಿದ್ದಾರೆ. ಈ ಯೋಜನೆಯಿಂದ ರಾಜ್ಯದ 1.67 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಮೂರು ವರ್ಷಗಳಲ್ಲಿ, ಗೃಹ ಬಳಕೆದಾರರ ಒಪ್ಪಿಗೆ ಪಡೆದು ಅವರ ಮನೆಯ ಛಾವಣಿಗಳಲ್ಲಿ ಅಥವಾ ಸಮೀಪದ ಸಾರ್ವಜನಿಕ ಸ್ಥಳಗಳಲ್ಲಿ ಸೌರ ಶಕ್ತಿ ಸ್ಥಾವರಗಳನ್ನು ಸ್ಥಾಪಿಸಿ ಹೆಚ್ಚಿನ ಪ್ರಯೋಜನ ಒದಗಿಸುವುದಾಗಿ ನಿತೀಶ್ ಭರವಸೆ ನೀಡಿದ್ದಾರೆ. ಈ ಕ್ರಮದಿಂದ ಗೃಹ ಬಳಕೆದಾರರಿಗೆ ಇನ್ನಷ್ಟು ಲಾಭ ತರಲಿದೆಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.