ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ತಿಂಗಳು ಕನ್ನಡ, ಹಿಂದಿ, ಬೆಂಗಾಲಿ, ತಮಿಳು ಭಾಷೆಯಲ್ಲೂ ʼಡಿಜಿಯಾತ್ರಾʼ ಲಭ್ಯವಾಗಲಿದ್ದು, ಪ್ರವಾಸಿಗರಿಗೆ ಶುಭಸುದ್ದಿ ಸಿಕ್ಕಂತಾಗಿದೆ.
ವಿಮಾನ ನಿಲ್ದಾಣದ ಪ್ರವೇಶ, ಭದ್ರತಾ ತಪಾಸಣೆ ಪ್ರದೇಶಗಳು ಮತ್ತು ವಿಮಾನ ಬೋರ್ಡಿಂಗ್ ಸೇರಿದಂತೆ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಮುಖ ಗುರುತಿಸುವಿಕೆಯ ವ್ಯವಸ್ಥೆಯನ್ನು ಆಧರಿಸಿರುವ ಡಿಜಿ ಯಾತ್ರಾ ಆ್ಯಪ್ ನ್ನು 2028 ರ ವೇಳೆಗೆ ಸುಮಾರು ಶೇ. 80 ರಷ್ಟು ದೇಶಿ ವಿಮಾನ ಪ್ರಯಾಣಿಕರು ಬಳಸುವ ನಿರೀಕ್ಷೆಯಿದೆ ಎಂದು ಸಿಇಒ ಸುರೇಶ್ ಖಡಕಭಾವಿ ತಿಳಿಸಿದ್ದಾರೆ.
ಇದರ ದೈನಂದಿನ ಬಳಕೆ ಪ್ರಸ್ತುತ ಶೇಕಡಾ 30 ರಿಂದ 35 ರಷ್ಟಿದೆ. “ಬಹುಶಃ, ಭಾಷೆ ಅಡ್ಡಿಯಾಗುವ ಸಾಧ್ಯತೆಯಿಂದ ವಿವಿಧ ಭಾಷೆಗಳಿಗೆ ಹೊಂದಿಕೆಯಾಗುವಂತೆ ಆ್ಯಪ್ ಪರಿಚಯಿಸಲಾಗುತ್ತಿದೆ. ಸದ್ಯ ಇಂಗ್ಲೀಷ್ ನಲ್ಲಿ ಮಾತ್ರ ಲಭ್ಯವಿದ್ದು, ಇದೇ ತಿಂಗಳಲ್ಲಿ ಹಿಂದಿ, ಬೆಂಗಾಲಿ, ತಮಿಳು, ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಪರಿಚಯಿಸಲಾಗುವುದು ಎಂದು ಹೇಳಿದರು.
ಇದೀಗ ಅವುಗಳನ್ನು ಪರಿಶೀಲಿಸುತ್ತಿದ್ದು, ಜುಲೈ ವೇಳೆಗೆ ಬಳಕೆದಾರರು ಆರು ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ತದನಂತರ ಸಾಂವಿಧಾನಿಕ ಮಾನ್ಯತೆ ಪಡೆದ ಎಲ್ಲಾ 22 ಭಾರತೀಯ ಭಾಷೆಗಳಲ್ಲಿ ಆ್ಯಪ್ ನ್ನು ಪರಿಚಯಿಸುವ ಗುರಿ ಹೊಂದಿದ್ದೇವೆ ಎಂದು ಖಡಕಭಾವಿ ಬ್ಯುಸಿನೆಸ್ ಸ್ಟಾಂಡರ್ಡ್ ಗೆ ತಿಳಿಸಿದ್ದಾರೆ.