ಹೊಸದಿಗಂತ ವರದಿ, ಚಿತ್ರದುರ್ಗ :
ಕೋಟೆ ನಾಡು ಚಿತ್ರದುರ್ಗದಲ್ಲಿ ಮಂಗಳವಾರ ಮಳೆಯ ಅಬ್ಬರ ಜೋರಾಗಿತ್ತು. ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆಯಿಂದಾಗಿ ಸಮಚಾರ ಅಸ್ತವಸ್ತವಾಗಿತ್ತು. ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು. ನಗರದ ರಸ್ತೆಗಳು ಸೇರಿದಂತೆ ವಿವಿಧ ಪ್ರದೇಶಗಲು ಜಲವೃತಗೊಂಡಿದ್ದವು. ಕಳೆದ ಒಂದು ವಾರದಿಂದ ಜಿಟಿಜಿಟಿ ಎಂದು ಜಿನುಗುತ್ತಿದ್ದ ಮಳೆ ಮಂಗಳವಾರ ತುಸು ಬಿರುಸು ಪಡೆದಿತ್ತು. ಇದರಿಂದಾಗಿ ದಾರಿಹೋಕರು ಮಳೆಗೆ ನೆಂದು ತೊಪ್ಪೆಯಾದರು.
ಜಿಲ್ಲೆಯ ವಿವಿಧೆಡೆಗಳಲ್ಲಿ ಮೆಕ್ಕೆಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿರುವ ರೈತರು ಕಳೆದ ಕೆಲವು ದಿನಗಳ ಹಿಂದೆ ಮಳೆ ಬರಲಿಲ್ಲ ಎಂದು ಮುಗಿಲಿನತ್ತ ಮುಖ ಮಾಡುತ್ತಿದ್ದರು. ಆದರೆ, ಮಂಗಳವಾರ ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಂಗಳವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಸುರಿದ ಮಳೆಯಿಂದಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಬೆಳೆಗಳಿಗೆ ಗೊಬ್ಬರ ನೀಡಲು ಮುಂದಾಗಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮುಂದಿನ ಒಂದು ವಾರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಮಂಗಳವಾರ ಸುರಿದ ಮಳೆ ಇದಕ್ಕೆ ಸಾಕ್ಷಿ ಎನ್ನುವಂತಿತ್ತು. ಚಿತ್ರದುರ್ಗದಲ್ಲಿ ಮಧ್ಯಾಹ್ನದ ನಂತರ ಸುರಿದ ಬಿರುಸಿನ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಶಾಲೆ ಬಿಡುವ ಸಮಯಕ್ಕೆ ಮಳೆ ಬಂದ ಕಾರಣ ಪೋಷಕರು ಮಕ್ಕಳನ್ನು ಕರೆತರುವ ಸಂದರ್ಭದಲ್ಲಿ ಪರದಾಡುವಂತಾಯಿತು.
ಧೋ ಎಂದು ಸುರಿದ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡವು. ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡುವಂತಾಯಿತು. ಶಾಲೆಗಳಿಂದ ಬಂದ ಶಾಲಾ ಬಸ್‌ಗಳು ಸೇರಿದಂತೆ ನಗರದಲ್ಲಿ ಸಂಚರಿಸುವ ನೂರಾರು ವಾಹನಗಳು ರಸ್ತೆಗಳಲ್ಲಿ ಉದ್ದುದ್ದ ಸಾಲಿನಲ್ಲಿ ನಿಂತು ಟ್ರಾಫಿಕ್ ಜಾಮ್ ಉಂಟಾಯಿತು. ನಗರದ ಗಾಂಧೀ ವೃತ್ತ, ಜಿಲ್ಲಾಧಿಕಾರಿ ವೃತ್ತದಲ್ಲಿ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿತ್ತು. ನಗರದ ವಿವಿಧೆಡೆಗಳಲ್ಲಿನ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು.
ಹೆಚ್ಚು ಮಳೆ ಸುರಿದ ಪರಿಣಾಮವಾಗಿ ಕೆಲ ಹೊತ್ತಿನಲ್ಲೇ ಸಾಕಷ್ಟು ನೀರು ಬಂದ ಪರಿಣಾಮ ರಸ್ತೆಗಳು ನೀರಿನಿಂದ ತುಂಬಿ ಹೋದವು. ದ್ವಿಚಕ್ರ ವಾಹನಗಳು, ಕಾರುಗಳು ಸಂಚರಿಸಲು ಅಡಚಣೆ ಉಂಟಾಯಿತು. ಚರಂಡಿಗಳು ನೀರಿನಿಂದ ತುಂಬಿ ಬೋರ್ಗರೆದು ಹರಿಯುತ್ತಿದ್ದವು. ಬೆಳಗಿನಿಂದ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆ ಜಿನುಗುತ್ತಿತ್ತು. ಮಧ್ಯಾಹ್ನ ಸುರಿದ ಮಳೆಯಿಂದಾಗಿ ಗಿಡ-ಮರ, ಬಳ್ಳಿಗಳು ನೀರಿನ ಹನಿಗಳಿಂದ ಅಲಂಕರಿಸಿದಂತಿತ್ತು. ಮಂಗಳವಾರ ಸುರಿದ ಮಳೆಯಿಂದಾಗಿ ಬಯಲುಸೀಮೆಯಲ್ಲಿ ಮಲೆನಾಡಿನ ವಾತಾವರಣ ಕಂಡುಬಂದಿತು.